ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲೆಗಳ ಸಮೇತ ಮಂಗಳವಾರ ಮಾತನಾಡುವುದಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ (D.K Suresh) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಸವಾಲ್ ಹಾಕಿರುವುದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದರು.
ಅವನು ಎಂಥಾ ಚೆಂಗ್ಲು ಅಂತ ಗೊತ್ತಿದ್ಯಾ? ನಾನು ದಾಖಲೆ ಸಮೇತ ಬಿಡುಗಡೆ ಮಾತನಾಡುತ್ತೇನೆ. ಆಸಿಡ್ ಮೊಟ್ಟೆ ತಲೆಗೆ ಬಿದ್ದು ಮೆಂಟಲ್ ಆಗಿದ್ದಾನೆ, ಏನೇನೊ ಮಾತನಾಡುತ್ತಿದ್ದಾನೆ ಎಂದು ಲೇವಡಿ ಮಾಡಿದರು.
ಆಸಿಡ್ ಮೊಟ್ಟೆ ಅವರ ತಲೆ ಮೇಲೆ ಬಿದ್ದಿದೆ. ಅದಕ್ಕೆ ಅವರಿಗೆ ಆ ರೀತಿ ಆಗಿದೆ ಎಂದು ವೈದ್ಯರು ಅವತ್ತೆ ಹೇಳಿದ್ರಲ್ಲ ಎಂದು ಸಂಸದ ಡಾ.ಮಂಜುನಾಥ್ ಹೆಸರು ಹೇಳದೆ ಪರೋಕ್ಷವಾಗಿ ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು.
ರಾಜ್ಯದ ಹುಚ್ಚು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆ ಸರಿ ಹೋಗಲ್ಲ. ಕೇಂದ್ರದ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದರು.
ರಾಜ್ಯಪಾಲರು, ರಾಷ್ಟ್ರಪತಿ ಎಲ್ಲರಿಗೂ ದೂರು ಕೊಡ್ತಾರಲ್ಲ. ಪ್ರಧಾನಿ ಸಾಮಾನ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಾರಾ, ಇಲ್ಲ ಮುನಿರತ್ನಗೆ ಪ್ರಧಾನಿ ಚಿಕಿತ್ಸೆ ಪಡೆಯುವ ಆಸ್ಪತ್ರೆಯಲ್ಲಿ ಟ್ರೀಟೆಂಟ್ ಕೊಡಿಸಬೇಕು. ದೆಹಲಿಯ ಏಮ್ಸೌನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದರು.
ಮುನಿರತ್ನ ವಿರುದ್ಧ ಬಳಕೆ ಮಾಡಲು ಚಂಗ್ಲು ಪದಕ್ಕಿಂದ ಬೇರೆ ಏನಾದರೂ ಇದೆಯೇ ಹೇಳಿ ಎಂದು ಪ್ರಶ್ನಿಸಿದ ಸುರೇಶ್, ಆ ಪದವನ್ನೇ ಬಳಸಿ ಅವನಿಗೆ ಛೀಮಾರಿ ಹಾಕುತ್ತೇನೆ. ಈಗ ಮಾತನಾಡುವುದಿಲ್ಲ ಎಂದರು.
ಜಾತಿ ಜನಗಣತಿ ವರದಿಯನ್ನು ನಾನು ಪೂರ್ಣವಾಗಿ ವರದಿಯನ್ನ ನೋಡಿಲ್ಲ, ಅಂಕಿ ಅಂಶಗಳನ್ನ ನೋಡಿ ಮಾತನಾಡುತ್ತೇನೆ. ಮಂಗಳವಾರ ಈ ಬಗ್ಗೆ ಮಾತಾಡುತ್ತೇನೆ ಎಂದರು.





