ಬೆಂಗಳೂರು: ಗೃಹ ಸಚಿವ ಜಿ.ಪರಮೇಶ್ವರ್ ಯಾವುದೇ ತಪ್ಪು ಮಾಡಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿ ಅವರ ಜೊತೆ ಚರ್ಚೆ ಮಾಡಿದೆ. ನಾವು ಸಾರ್ವಜನಿಕ ಜೀವನದಲ್ಲಿದ್ದು, ಬೇಕಾದಷ್ಟು ಜನ ಟ್ರಸ್ಟ್ ನಡೆಸುತ್ತಾರೆ. ಮದುವೆ ಶುಭ ಸಮಾರಂಭದಲ್ಲಿ ಅನೇಕ ಉಡುಗೊರೆಗಳನ್ನು ಕೊಟ್ಟಿರಬಹುದು. ಪರಮೇಶ್ವರ್ ಅವರಂತಹ ಪ್ರಭಾವಿ ವ್ಯಕ್ತಿ ಬೇರೆಯವರಿಗೆ ಸ್ಮಗ್ಲಿಂಗ್ ಮಾಡಲು ಹೇಳಲು ಸಾಧ್ಯವಿಲ್ಲ ಎಂದರು.
ಪರಮೇಶ್ವರ್ ಜೊತೆ ಮಾತನಾಡಿದ್ದೇನೆ. ರನ್ಯಾರಾವ್‌ಗೆ 25 ಲಕ್ಷ ರೂ ವರೆಗೆ ನೀಡಿದ್ದಾರಂತೆ. ಕುಟುಂಬದವರಿಗೂ ಆ ಹಣ ಕೊಟ್ಟಿರಬಹುದು. ಪರಮೇಶ್ವರ್ ಅವರು ಕಾನೂನಿಗೆ ತಲೆಬಾಗುವ ವ್ಯಕ್ತಿ. ಅವರ ಬಗ್ಗೆ ನಮಗೆ ಹೆಮ್ಮೆಯಿದೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿಸಿದರು.




