Mysore
28
haze

Social Media

ಗುರುವಾರ, 01 ಜನವರಿ 2026
Light
Dark

ಪ್ರತ್ಯಾಂಗಿರಾ ದೇವಿಗೆ ವಿಶೇಷ ಪೂಜೆ: ನನಗೆ ಧರ್ಮ, ದೇವರ ಮೇಲೆ ನಂಬಿಕೆಯಿದೆ ಯಾವುದೇ ವಿಶೇಷವಿಲ್ಲ-ಡಿ.ಕೆ.ಶಿವಕುಮಾರ್‌

ಬೆಂಗಳೂರು: ನನಗೆ ಧರ್ಮ ಹಾಗೂ ದೇವರ ಮೇಲೆ ನಂಬಿಕೆಯಿದ್ದು, ನಾನು ಮನಸ್ಸಿನ ನೆಮ್ಮದಿ, ರಕ್ಷಣೆ ಮತ್ತು ಸಮಾಧಾನಕ್ಕಾಗಿ ಹೋಮ ಮಾಡಿಸಿದ್ದೇನೆ. ಅದರಲ್ಲಿ ಯಾವುದೇ ವಿಶೇಷವಿಲ್ಲ, ಪ್ರತಿನಿತ್ಯವೂ ದೇವರ ದರ್ಶನ ಮಾಡುವ ವ್ಯಕ್ತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ನಗರದ ಮಲ್ಲೇಶ್ವರಂನ ವೆಂಕಟೇಶ್ವರ ದೇವಾಲಯದಲ್ಲಿ ಇಂದು(ಜನವರಿ.10) ವೈಕುಂಠ ಏಕಾದಶಿಯ ಪ್ರಯುಕ್ತ ದೇವರ ದರ್ಶನ ಪಡೆದ ನಂತರ ಪ್ರತ್ಯಾಂಗಿರಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪೂಜೆ ಮಾಡಬಾರದಾ? ನಾನು ದೇವರಲ್ಲಿ ನಂಬಿಕೆಯಿಟ್ಟಿರುವ ವ್ಯಕ್ತಿ. ನನಗೆ ನಮ್ಮ ದೇವರು, ಧರ್ಮ ಹಾಗೂ ನಮ್ಮ ಆಚರಣೆಗಳ ಮೇಲೆ ನಂಬಿಕೆಯಿದೆ. ನಮ್ಮ ಮನೆಯಲ್ಲಿ ನಾನು ಪ್ರತಿದಿನ ಮನೆಯಲ್ಲಿ ದೇವರ ಪೂಜೆ ಮಾಡುತ್ತೇನೆ. ಅದರಲ್ಲಿ ಯಾವುದೇ ವಿಶೇಷವಿಲ್ಲ, ನಾನು ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಡುವುದೇ ಇಲ್ಲ. ನಾನು ಯಾವ ಶಕ್ತಿಯನ್ನು ನಂಬುತ್ತೇನೆ ಅದರ ಮೇಲೆ ಪ್ರೀತಿ ಮತ್ತು ಭಕ್ತಿಯಿದ್ದೇ ಇರುತ್ತದೆ ಎಂದು ಹೇಳಿದ್ದಾರೆ.

ಈ ವೇಳೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗಳ ಬಗ್ಗೆ ಮಾತನಾಡಿದ ಅವರು, ನಾನು ಪ್ರತ್ಯಾಂಗಿರಾ ದೇವಿಗೆ ಪೂಜೆ ಸಲ್ಲಿಸಿದ್ದು, ನನಗೆ ಯಾರಾದರೂ ತೊಂದರೆ ಕೊಡುತ್ತಾರೋ ಅವರಿಂದ ನನಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ. ಧರ್ಮೋ ರಕ್ಷತಿ ರಕ್ಷತಃ ಎಂಬ ಶ್ಲೋಕದಂತೆ, ಅಂದರೆ ಧರ್ಮವನ್ನು ನಾವು ಉಳಿಸಿದರೆ ಧರ್ಮವೂ ಉಳಿಸುತ್ತದೆ ಎನ್ನುವುದನ್ನು ನಂಬುವವನು ನಾನು. ಹೀಗಾಗಿ ಅದರಲ್ಲಿ ಯಾವುದೇ ರಹಸ್ಯವಿಲ್ಲ ಎಂದಿದ್ದಾರೆ.

ಇನ್ನೂ ನೀವು (ಮಾಧ್ಯಮ) ಕೂಡ ನಮಗೆ ತೊಂದರೆ ಕೊಡುತ್ತೀರಾ. ಇಲ್ಲದೇ ಇರುವ ಹೊಸ ವಿವಾದಗಳನ್ನು ಸೃಷ್ಠಿಸುತ್ತೀರಾ ಆದ್ದರಿಂದ ನಿಮ್ಮಿಂದಲೂ ನಮಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥಿಸುತ್ತಿರುತ್ತೇನೆ. ವೈಕುಂಠ ಏಕಾದಶಿಯಂದು ರಾಜ್ಯದ ಎಲ್ಲಾ ಕಡೆ ಜನರು ವೆಂಕಟೇಶ್ವರನ ದರ್ಶನ ಮಾಡುತ್ತಿದ್ದಾರೆ. ಹಾಗಾಗಿ ವೆಂಕಟೇಶ್ವರನ ಜೊತೆ ಲಕ್ಷ್ಮೀ ಸೇರಿದಂತೆ ಎಲ್ಲರ ಮನೆಯಲ್ಲೂ ಐಶ್ವರ್ಯ ಹೆಚ್ಚಾಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Tags:
error: Content is protected !!