ಬೆಂಗಳೂರು: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಗ್ ಕಟ್ಟಾಗಿ ಸಾವಿರಾರು ಕ್ಯೂಸೆಕ್ಸ್ ನೀರು ಪೋಲಾಗುತ್ತಿದ್ದು, ಈ ಸಂಬಂಧ ತುಂಗಭದ್ರಾ ಡ್ಯಾಂ ನೀರನ್ನು ಉಳಿಕೊಂಡೆ ಕ್ರಸ್ಟ್ ಗೇಟ್ ದುರಸ್ತಿಗೊಳಿಸುವ ಬಗ್ಗೆ ತಜ್ಞರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ತುಂಗಭದ್ರಾ ಜಲಾಶಯಕ್ಕೆ ತೆರಳುವ ಮುನ್ನಾ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಡ್ಯಾಂನಿಂದ ನೀರು ಖಾಲಿ ಮಾಡಿಸದೇ ಗೇಟ್ ದುರಸ್ತಿ ಮಾಡಲು ಸಾಧ್ಯವಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತಜ್ಞರ ವರದಿಯ ಬಳಿಕ ಮುಂದಿನ ನಡೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನಾನು ಶನಿವಾರ ರಾತ್ರಿಯಿಂದಲೇ ಗೇಟ್ ಮುರಿದ ಬಗ್ಗೆ ದೂರವಾಣಿ ಸಂಪರ್ಕದಲ್ಲಿದ್ದು, ಪ್ರತಿ ಕ್ಷಣದ ಮಾಹಿತಿ ಪಡೆದು ಚರ್ಚಿಸುತ್ತಿರುವುದಾಗಿ ಅವರು ಹೇಳಿದರು.
ತುಂಗಭದ್ರಾ ಗೇಟ್‌ನ 1-16 ಗೇಟ್ ಸಿಡಬ್ಲ್ಯೂಸಿ ನಿರ್ವಹಣೆ ಮಾಡಿದರೆ, 17 ರಿಂದ 32 ಗೇಟ್‌ಗಳ ನಿರ್ವಹಣೆ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಚೈನ್ ಕಟ್ಟಾಗಿ ಭಾರೀ ಪ್ರಮಾಣದ ನೀರು ಪೋಲಾಗುತ್ತಿದ್ದು, ಡ್ಯಾಂನ ಹಿತದೃಷ್ಠಿಯಿಂದ ಎಲ್ಲಾ ಗೇಟ್‌ಗಳನ್ನು ತೆಗೆದು ನೀರು ಬಿಡಲಾಗುತ್ತಿದೆ. ನದಿ ತಟದ ಜನರು ಎಚ್ಚರ ವಹಿಸಬೇಕೆಂದು ಕೋರಿದರು.
ನೀರಿನ ಅಭಾವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಇದೊಂದು ಗಂಭೀರವಾದ ವಿಚಾರವಾಗಿದೆ. ಸ್ಥಳೀಯರ, ರೈತರ ಅಭಿಪ್ರಾಯ ಹಾಗೂ ತಜ್ಞರ ವರದಿ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಡಿಕೆ ಶಿವಕುಮಾರ್ ತಿಳಿಸಿದರು.





