ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಗಾದಿಗೆ ಕಿತ್ತಾಟ ಜಾಸ್ತಿ ಆಗಿದೆ. ಧೈರ್ಯ ಇದ್ದರೆ ಡಿ.ಕೆ.ಶಿವಕುಮಾರ್ ಪವರ್ ಶೇರಿಂಗ್ ಸತ್ಯ ಬಹಿರಂಗಪಡಿಸಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜ್ಯದ ಅಭಿವೃದ್ದಿಯ ಬಗ್ಗೆ ಮಾತನಾಡುವುದು ಬಿಟ್ಟು ಸಿಎಂ ಕುರ್ಚಿ ಬಗ್ಗೆಯೇ ಮಾತನಾಡಿ, ಸಿಎಂ ಕುರ್ಚಿ ಖಾಲಿ ಇಲ್ಲವಲ್ಲ ಎಂದೇ ಹೇಳುತ್ತಿದ್ದಾರೆ. ಆದರೆ ಡಿಕೆಶಿ ಬಣ ಕುರ್ಚಿ ಖಾಲಿ ಮಾಡಿಸುವ ಬಗ್ಗೆಯೇ ಚಿಂತಿಸುತ್ತಿದೆ. ಅಡಳಿತ ಮಾಡುವುದು ಬಿಟ್ಟು ಕಾಂಗ್ರೆಸ್ ಕುರ್ಚಿಗಾಗಿ ಪವರ್ ಪಾಲಿಟಿಕ್ಸ್ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಡಿಕೆಶಿ ಚುನಾವಣೆ ವೇಳೆ ನನ್ನ ಕೈಗೆ ಪೆನ್ನು ಕೊಡಿ ಎಂದು ಹೇಳುತ್ತಿದ್ದರು. ಈಗ ಎಂಎಲ್‌ಎಗಳ ಮುಂದೆ ಪೆನ್ನು ಅಂಗಲಾಚುವ ಸ್ಥಿತಿ ಬಂದಿದೆ. ಡಿಕೆಶಿಗೆ ಧೈರ್ಯವಿದ್ದರೆ ಪವರ್ ಶೇರಿಂಗ್ ಮಾತುಕತೆ ವೇಳೆ ಯಾರಿದ್ದರು ಎಂದು ಹೇಳಲಿ ಎಂದಿದ್ದಾರೆ.
ಸಚಿವ ರಾಜಣ್ಣ, ಪರಮೇಶ್ವರ್ ಎಲ್ಲರೂ ಡಿಕೆಶಿ ವಿರುದ್ಧ ಇದ್ದಾರೆ. ಆದರೆ ಮಾಗಡಿ ಶಾಸಕ ಬಾಲಕೃಷ್ಣ ಡಿಕೆಶಿನೆ ಮುಂದಿನ ಸಿಎಂ ಎನ್ನುತ್ತಾರೆ. ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ಬೆಲೆಯೂ ಇಲ್ಲ, ರೈತರ ಬೆಳೆಗೆ ಪರಿಹಾರವೂ ಇಲ್ಲದಂತಾಗಿದೆ. ಒಳ್ಳೆಯ ಸರ್ಕಾರ ನೀಡುತ್ತೇವೆ ಎಂದು ರಾಜ್ಯದ ಜನತೆಗೆ ಭರವಸೆ ನೀಡಿದ್ದ ಕಾಂಗ್ರೆಸ್ ಆಭದ್ರ ಸರ್ಕಾರ ನೀಡಿ ಪ್ರತಿದಿನ ಕುರ್ಚಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈಗಾಗಲೇ ಬೆಲೆ ಏರಿಕೆ ಜಾಸ್ತಿಯಾಗಿದೆ. ಬಜೆಟ್‌ನಲ್ಲಿ ಇನ್ನು ಏನೇನು ಕಾದಿದೆಯೋ. ಇದನ್ನೆಲ್ಲ ಸರಿ ಮಾಡದೇ ಇದ್ದರೆ, ದೇಶದಲ್ಲಿ ಜನತೆ ಕಾಂಗ್ರೆಸ್ ಓಡಿಸಿದ ಹಾಗೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಓಡಿಸುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.