ಬೆಂಗಳೂರು: ಒಂದು ವೇಳೆ ಸಾಧ್ಯವಾದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನಾದರೂ ನಿಲ್ಲಿಸಬಹುದು. ಕಾಂಗ್ರೆಸ್ ನಡುವೆ ನಡೆಯುತ್ತಿರುವ ಆಂತರಿಕ ಕಲಹವನ್ನು ಯಾವುದೇ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ. ದೀಪಾವಳಿ ಧಮಾಕಾ ಗ್ಯಾರಂಟಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ – ಡಿಸಿಎಂ ಮಧ್ಯೆ ಬಹಳಷ್ಟು ವ್ಯತ್ಯಾಸಗಳಿವೆ. ಒಂದು ವೇಳೆ ರಷ್ಯಾ ಉಕ್ರೇನ್ ಯುದ್ಧ ನಿಲ್ಲಬಹುದು. ಆದರೆ ಕಾಂಗ್ರೆಸ್ ಒಳಗಿನ ಅಂತರ್ ಯುದ್ಧ ನಿಲ್ಲುವುದಿಲ್ಲ. ಕಾಂಗ್ರೆಸ್‌ನಲ್ಲಿ ದೀಪಾವಳಿ ಧಮಾಕಾ ಪಕ್ಕಾ ಎಂದಿದ್ದಾರೆ.
ಕಾಂಗ್ರೆಸ್ ಮೂರ್ಖರ ಪಕ್ಷ. ಚುನಾವಣಾ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸುವುದು ಮೂರ್ಖತನದ ಪರಮಾವಧಿ. ದಾಖಲೆ ಇದ್ದರೆ ನ್ಯಾಯಾಲಯಕ್ಕೆ ಕೊಡಲಿ ಎಂದು ಸವಾಲು ಹಾಕಿದ್ದಾರೆ. ಕಾಂಗ್ರೆಸ್‍ನ ಈ ರೀತಿ ಹುಚ್ಚಾಟ, ರಂಪಾಟ ಅಪಾಯಕಾರಿ ಬೆಳವಣಿಗೆ. ದೇಶದ ಜನರಲ್ಲಿ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಅನುಮಾನ ಮೂಡಿಸುವುದು ಅಕ್ಷಮ್ಯವಾಗಿದೆ ಎಂದು ಹೇಳಿದರು.
ನಮಗೆ ರ್ಯಾಲಿ ಅಥವಾ ಸಿಎಂ ಮನೆ ಮುತ್ತಿಗೆ ಹಾಕುತ್ತೇವೆ ಎಂದರೆ ಹೈಕೋರ್ಟ್ ಆದೇಶ ತೋರಿಸುತ್ತಾರೆ. ಪೊಲೀಸರ ಈ ಕಾನೂನು ಕಾಂಗ್ರೆಸ್‍ಗೂ ಅನ್ವಯ ಆಗಬೇಕು ಎಂದು ಪ್ರಶ್ನೆ ಮಾಡಿದರು. ನಮಗೊಂದು ಅವರಿಗೊಂದು ಕಾನೂನು ಇಲ್ಲ. ಅವರ ರ್ಯಾಲಿಗೆ ಅವಕಾಶ ಕೊಟ್ಟರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ನೋಡೋಣ ಏನ್ ಮಾಡಬೇಕೆಂದು ಚರ್ಚೆ ಮಾಡುವುದಾಗಿ ಹೇಳಿದರು.
ರಾಹುಲ್ ಗಾಂಧಿ ಬರುವುದೇ ಅನುಮಾನ ಎಂದಿದ್ದಾರೆ. ಮೊದಲು ಅವರು ಬರಲಿ. ನಂತರ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಕಾಂಗ್ರೆಸ್ ಮುಖಂಡರು ಆ.4ರಂದು ಅದೇನು ಕಡಿದು ಕಟ್ಟೆ ಹಾಕುತ್ತಾರೆಂದು ನಾವೂ ನೋಡುತ್ತೇವೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಶಾಸಕರ ಹಾಗೂ ಸಚಿವರ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ನೀಡದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದಲೇ ಸಾಬೀತಾಗಿದೆ ಎಂದರು.





