ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ ಕೊರತೆಯಾಗುವ ಆತಂಕ ಎದುರಾಗಿದೆ.
ಡಿಸೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಇಲ್ಲಿಯವರೆಗೆ ಮಾವಿನ ಗಿಡಗಳಲ್ಲಿ ಹೂವುಗಳೇ ಕಾಣುತ್ತಿಲ್ಲ. ಅಲ್ಲವೇ ಮಾವಿನ ಗಿಡಗಳಲ್ಲಿ ಕಪ್ಪು ಮಚ್ಚೆ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಎಲೆ ಹಾಗೂ ಕಾಂಡದಲ್ಲಿ ರೋಗ ಕಂಡುಬರುತ್ತಿರುವುದರಿಂದ ಇಳುವರಿ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ.
ಮಾವನ್ನು ಹೆಚ್ಚಾಗಿ ಬೆಳೆಯುವ ಗದಗ ಜಿಲ್ಲೆಯಾದ್ಯಂತ 600ರಿಂದ 700 ಹೆಕ್ಟೇರ್ ಪ್ರದೇಶದಲ್ಲಿ ಮಾವು ರೋಗಕ್ಕೆ ತುತ್ತಾಗಿದೆ.
ಕೆಂಪು ಮಣ್ಣಿನಲ್ಲಿ ಹೆಚ್ಚಾಗಿ ಈ ಮಾವನ್ನು ಬೆಳೆಯುವುದರಿಂದ ಗದಗ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಾವು ಬೆಳೆಯಲಾಗುತ್ತದೆ.
ಶಿಲೀಂಧ್ರ ಕಣಗಳು ಗಾಳಿಯ ಸಹಾಯದಿಂದ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹಾರಾಡುತ್ತಾ ಹೋಗುತ್ತಿರುತ್ತದೆ. ಪರಿಣಾಮ ರೋಗ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ತಗುಲುತ್ತಿದೆ.
ಮುಂದಿನ ಜನವರಿ ತಿಂಗಳಿನಲ್ಲಿ ಹೆಚ್ಚಾಗಿ ಮಂಜು ಬೀಳುವುದರಿಂದ ಮಾವಿನ ಗಿಡದಲ್ಲಿ ಇಳುವರಿ ಕಡಿಮೆಯಾಗಿ ರೋಗಗಳು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈಗಾಗಲೇ ಮಾವು ರೋಗ ನಿಯಂತ್ರಣದ ಕುರಿತು ಕೃಷಿ ವಿಜ್ಞಾನ ಕೇಂದ್ರದಿಂದ ಕಾರ್ಯಕ್ರಮ ಹಾಗೂ ರೈತರಿಗೆ ತರಬೇತಿ ನೀಡಲಾಗುತ್ತಿದೆ.