Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರಾಜ್ಯದಲ್ಲಿ ಏಡ್ಸ್‌ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ: ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ

ಬೆಂಗಳೂರು: ರಾಜ್ಯಾದ್ಯಂತ ಏಡ್ಸ್‌ ಸೋಂಕಿತರ ಸಂಖ್ಯೆ ಇತ್ತೀಚಿನ ಹಲವು ವರ್ಷಗಳಲ್ಲಿ ಕಡಿಮೆಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೋದ ವರ್ಷದಲ್ಲಿ 13.183 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದವು. ಈ ವರ್ಷದ ಆಕ್ಟೋಬರ್‌ವರೆಗೆ 7,720 ಪ್ರಕರಣಗಳು ಮಾತ್ರ ದಾಖಲಾಗಿವೆ.

ಗರ್ಭಿಣಿಯರಲ್ಲಿ ಕಳೆದ ವರ್ಷ 539 ಸೋಂಕು ಪ್ರಕರಣಗಳು ಧೃಡಪಟ್ಟಿದ್ದವು. ಈ ವರ್ಷದ ಆಕ್ಟೋಬರ್‌ವರೆಗೆ 247 ಮಾತ್ರ ವರದಿಯಾಗಿವೆ. ಗರ್ಭಿಣಿ ಮಹಿಳೆಯರಲ್ಲಿ ಸೋಂಕು ಧೃಡಪ್ರಮಾಣ ಶೇ.0.03ರಷ್ಟಿದೆ. ಇದನ್ನು ಮುಂದಿನ ದಿನಗಳಲ್ಲಿ ಶೂನ್ಯಕ್ಕೆ ಇಳಿಸುವ ಗುರಿಯಿದೆ ಎಂದು ಹೇಳಿದರು.

ಏಡ್ಸ್‌ ಸೋಂಕು ಪ್ರಮಾಣವು ಟ್ರಕ್‌ ಚಾಲಕರು, ಕೆಲಸದ ಮೇಲೆ ಪ್ರಯಾಣ ಮಾಡುವವರು, ಲೈಂಗಿಕ ಕಾರ್ಯಕರ್ತರು, ಡ್ರಗ್ಸ್‌ ವ್ಯಸನಿಗಳಲ್ಲಿ ಹೆಚ್ಚಿದೆ. ಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಮಾರಣಾಂತಿಕ ಕಾಯಿಲೆಯಿಂದ ಪಾರಾಗಬಹುದು. ಲೈಂಗಿಕ ಕಾರ್ಯಕರ್ತರನ್ನು ಸಾಮಾಜಿಕ ಮುಖ್ಯ ವಾಹಿನಿಗೆ ತರಬೇಕು. ಅವರು ದೂರವಿರುವುದೇ ಈ ಸಮಸ್ಯೆಗಳು ಹೆಚ್ಚಾಗಲು ಕಾರಣ ವಾಗುತ್ತಿವೆ. ಅವರನ್ನು ಮಾನವೀಯತೆ ದೃಷ್ಟಿಯಿಂದ ನೋಡಿದರೆ ಮಾತ್ರ ಸೋಂಕಿನ ಪ್ರಮಾಣ ತಡೆಗಟ್ಟಲು ಸಾಧ್ಯ ಎಂದರು.

ರಾಜ್ಯದಲ್ಲಿ ಚಿಕಿತ್ಸೆ, ಆಪ್ತ ಸಮಾಲೋಚನಾ ಕೇಂದ್ರಗಳ ಸಹಕಾರದಿಂದ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಏಡ್ಸ್‌ ಸೋಂಕನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ನಾವೆಲ್ಲಾ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.

ರಾಜ್ಯದಲ್ಲಿ 433 ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಿವೆ. 2592 ಸೌಲಭ್ಯಾಧಾರಿತ ಆಪ್ತ ಸಮಾಲೋಚನಾ ಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು.

Tags: