ಬೆಂಗಳೂರು: ಮುಸ್ಲಿಂ ಸಮುದಾಯವನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ನನಗೆ ಬಹಳ ನೋವಾಗಿದೆ. ಒಬ್ಬ ಅಮಾಯಕನನ್ನು ಹೊಡೆದು ಸಾಯಿಸಲಾಗಿದೆ. ಅಲ್ಲಿ ಇನ್ನೂ ಹೆಚ್ಚಿನ ಜನರನ್ನು ಕೊಲ್ಲಲು ಆಲೋಚನೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಿ ಉಗ್ರವಾದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಮುಸ್ಲಿಮರನ್ನು ಟಾರ್ಗೆಟ್ ಮಾಡುವುದೇ ಬಿಜೆಪಿಯವರ ಕೆಲಸ. ಮುಸಲ್ಮಾನರು ಅಂದಾಕ್ಷಣ ಪಾಕಿಸ್ತಾನ ಎಂದು ಬಿಂಬಿಸಲಾಗುತ್ತಿದೆ. ಬಿಜೆಪಿಯವರೇ ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.





