ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿಗಳು ವೇತನ ಸಿಗದ ಕಾರಣದಿಂದಾಗಿ ಇದೀಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಕೊರೊನಾ ವೈರಸ್ ಶುರುವಾದಾಗಿನಿಂದ ಈ ವೇತನ ಸಮಸ್ಯೆ ಉಂಟಾಗಿದ್ದು ಆಗಿನಿಂದ ಅರ್ಧ ಸಂಬಳ ಮಾತ್ರ ಡಯಾಲಿಸಿಸ್ ಸಿಬ್ಬಂದಿಗಳ ಕೈ ಸೇರಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಕಳೆದ ಎರಡು ಮೂರು ವರ್ಷಗಳಿಂದ ಅರ್ಧ ಸಂಬಳ ಪಡೆದು ಬೇಸತ್ತಿದ್ದ ಡಯಾಲಿಸಿಸ್ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳುಗಳಿಂದ ಸಂಬಳವೂ ಸಹ ಬರದಿರುವ ಕಾರಣ ಈ ನಿರ್ಧಾರವನ್ನು ಸಿಬ್ಬಂದಿಗಳು ಕೈಗೊಂಡಿದ್ದಾರೆ. ನವೆಂಬರ್ 30ರಿಂದ ರಾಜ್ಯದಲ್ಲಿರುವ ಡಯಾಲಿಸಿಸ್ ಕೇಂದ್ರಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಇನ್ನು ರಾಜ್ಯಾದ್ಯಂತ ಒಟ್ಟು 202 ಡಯಾಲಿಸಿಸ್ ಕೇಂದ್ರಗಳಿದ್ದು, ಒಟ್ಟು 650 ಕೆಲಸ ಮಾಡುತ್ತಿದ್ದಾರೆ. 2021ರಲ್ಲಿ ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ಮಾಡುತ್ತಿದ್ದ ಕೊಲ್ಕತ್ತಾದ ಸಂಸ್ಥೆ ಬಿಆರ್‌ಎಸ್ ಹಿಂದೆ ಸರಿದಿತ್ತು. ಅಂದಿನಿಂದ 45 ಕೇಂದ್ರಗಳನ್ನು ನಿರ್ವಹಿಸುತ್ತಿದ್ದ ಇಎಸ್‌ಕೆಎಜಿ ಸಂಸ್ಥೆ ಹೆಗಲಿಗೆ ರಾಜ್ಯದ ಎಲ್ಲಾ ಡಯಾಲಿಸಿಸ್ ಕೇಂದ್ರಗಳ ಜವಾಬ್ದಾರಿ ಬಿದ್ದಿದೆ. ಈ ಸಂಸ್ಥೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯಾರಿಗೂ ಕಳೆದ ಎರಡು ತಿಂಗಳುಗಳಿಂದ ಸಂಬಳ, ಪಿಎಫ್ ಹಾಗೂ ಇಎಸ್‌ಐ ಸಹ ಸಿಗದ ಕಾರಣ ಜೀವನ ನಡೆಸಲು ಕಷ್ಟವಾಗುತ್ತಿದೆ, ಇದರ ಕುರಿತು ಗಮನ ಹರಿಸಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಮೂರು ಬಾರಿ ಭೇಟಿ ಮಾಡಿದರೂ ಸಹ ಯಾವುದೇ ಬೆಳವಣಿಗೆಯಾಗದ ಕಾರಣ ಬಂದ್ ಮಾಡುವ ನಿರ್ಣಯವನ್ನು ಡಯಾಲಿಸಿಸ್ ಸಿಬ್ಬಂದಿ ತೆಗೆದುಕೊಂಡಿದ್ದಾರೆ.





