ಧರ್ಮಸ್ಥಳ: ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಗೆ ಮತ್ತೆ 9 ಮಂದಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮೃತದೇಹಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಂಬಂಧಿಸಿದಂತೆ ಮೂವರು ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿದ ಬಳಿಕ 20 ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 9 ಮಂದಿ ಪೊಲೀಸರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಈಗಾಗಲೇ ಇರುವ 20 ಮಂದಿ ಪೊಲೀಸ್ ಅಧಿಕಾರಿಗಳ ಎಸ್‌ಐಟಿ ತಂಡಕ್ಕೆ ಮತ್ತಷ್ಟು ಬಲ ತುಂಬಿ ಆದೇಶ ಹೊರಡಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಲಾರೆನ್ಸ್, ಸೆನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಪುನೀತ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಚ್.ಸಿ.ಮನೋಹರ, ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಮನೋಜ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಸಿ.ಸಂದೀಪ್, ಉಡುಪಿ ಸಿಎಸ್‌ಪಿ ಪೊಲೀಸ್ ಠಾಣೆಯ ಪಿ.ಸಿ.ಲೋಕೇಶ್, ಹೊನ್ನಾವರ ಪೊಲೀಸ್ ಠಾಣೆಯ ಎಚ್.ಸಿ.ಸತೀಶ್ ನಾಯ್ಕ, ಮಂಗಳೂರು ಎಫ್‌ಎಮ್‌ಎಸ್ ದಳದ ಎಚ್.ಸಿ.ಜಯರಾಮೇಗೌಡ ಮತ್ತು ಎಚ್.ಸಿ.ಬಾಲಕೃಷ್ಣ ಗೌಡ ಇದರಲ್ಲಿ ಸೇರಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶವ ಹೂತಿಟ್ಟ ಪ್ರಕರಣವು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣ ಈ ಹಿಂದೆ ಸ್ವಚ್ಛತಾ ಕಾರ್ಮಿಕನಾಗಿದ್ದ ಅನಾಮಿಕ ವ್ಯಕ್ತಿ ದೂರಿನಿಂದ ಬೆಳಕಿಗೆ ಬಂದಿದ್ದು, ಆತ 1998ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದಾಗಿ ಆರೋಪಿಸಿದ್ದಾನೆ.





