ಧರ್ಮಸ್ಥಳ: ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೂರುದಾರ ತೋರಿಸಿರುವ 16ನೇ ಪಾಯಿಂಟ್‌ನಲ್ಲಿ ಎಸ್‌ಐಟಿ ತಂಡ ಅಸ್ಥಿಪಂಜರಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಮಾಸ್ಕ್ ಮ್ಯಾನ್ ದೂರುದಾರ ತೋರಿಸಿರುವ ಜಾಗ ಧರ್ಮಸ್ಥಳದ ಬಾಹುಬಲಿ ಮೂರ್ತಿ ಇರುವ ರತ್ನಗಿರಿ ಬೆಟ್ಟದ ತಪ್ಪಲಿನಲ್ಲಿ 16ನೇ ಪಾಯಿಂಟ್ ಎಂದು ಗುರುತಿಸಲಾಗಿದ್ದು, ಅಲ್ಲಿ ಅಸ್ಥಿಪಂಜರಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಶವಗಳನ್ನು ಹೂತು ಹಾಕಿರುವುದನ್ನು ನಾವು ನೋಡಿದ್ದೇವೆ ಎಂದು ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಬಂದು ಇಬ್ಬರು ಸ್ಥಳೀಯರು ದೂರು ನೀಡಿದ್ದಾರೆ.
ನಮ್ಮನ್ನು ಕರೆದುಕೊಂಡು ಹೋಗಿ, ನಾವು ಜಾಗ ತೋರಿಸುತ್ತೇವೆ. ನಾವು ತೋರಿಸಿದ ಜಾಗವನ್ನು ಶೋಧ ಮಾಡಿ ಎಂದು ಎಸ್‌ಐಟಿಗೆ ಮನವಿ ಸಲ್ಲಿಸಿದ್ದಾರೆ. ಮನವಿ ಪಡೆದ ಎಸ್‌ಐಟಿ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ನೀಡುವಂತೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ.





