Mysore
33
few clouds

Social Media

ಬುಧವಾರ, 01 ಏಪ್ರಿಲ 2026
Light
Dark

ಉಪಚುನಾವಣೆಯಲ್ಲಿ ಅಭಿವೃದ್ಧಿ ಹಾಗೂ ಗ್ಯಾರಂಟಿಗಳು ಕಾಂಗ್ರೆಸ್‌ಗೆ ನೆರವಾಗಲಿದೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ

ದಾವಣಗೆರೆ: ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮವಾಗಿದ್ದು, ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಅಂತರದ ಗೆಲುವು ಸಾಧಿಸುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಹಾಗೂ ಬಾಗಲಕೋಟೆಯಲ್ಲಿ ಹೆಚ್.ವೈ.ಮೇಟಿಯವರು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ನೆರವಿಗೆ ಬಂದಿವೆ ಎಂದರು.

ಬಿಜೆಪಿಯವರು ಬಡವರ ಯೋಜನೆಗಳಾದ ಗ್ಯಾರಂಟಿಗಳನ್ನು ವಿರೋಧಿಸುತ್ತಾರೆ. ಒಟ್ಟು ಗ್ಯಾರಂಟಿ ಯೋಜನೆಗೆ ಸುಮಾರು 1,31,000 ಕೋಟಿ ರೂ.ಗಳನ್ನು ನಾವು ವ್ಯಯ ಮಾಡಿ ಜನ ಸಾಮಾನ್ಯರ ಬದುಕಿಗೆ ಅರ್ಪಿಸಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರ ಒಂದರಲ್ಲಿ 535 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಯೂನಿವರ್ಸಲ್ ಬೇಸಿಕ್ ಇನ್ಕಂ ತತ್ವದಲ್ಲಿ ನಂಬಿಕೆಯಿರಿಸಿ, ತಳಸಮುದಾಯದವರಿಗೆ ಅನುಕೂಲ ಕಲ್ಪಿಸುತ್ತಿದೆ. ಸಮಾಜದ ಕಟ್ಟಕಡೆಯ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯ ಎಂದರು.

ಗ್ಯಾರಂಟಿಗಳ ಮೂಲಕ ಸಮಾಜದ ವಿವಿಧ ಜಾತಿಧರ್ಮ ಭಾಷೆಗಳ ಬಡವರಿಗೆ, ಮಧ್ಯವರ್ತಿಗಳ ಹಾವಳಿಯಿಲ್ಲದೇ, ನೇರವಾಗಿ ಅವರ ಖಾತೆಗೆ ಆರ್ಥಿಕ ಲಾಭ ನೀಡಲಾಗುತ್ತಿದೆ ಎಂದರು.

ಬಿಜೆಪಿಯವರು ಗ್ಯಾರಂಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ, ಖಜಾನೆ ಖಾಲಿಯಾಗುತ್ತದೆ ಎಂದು ಟೀಕಿಸುತ್ತಾರೆ. ಆದರೆ ಜನರ ಖಾತೆಗೆ ನೇರವಾಗಿ ಹಣ ತಲುಪುದರಿಂದ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಅಂದರೆ 2023ರ ಮಾರ್ಚ್ ವರೆಗೆ 530000 ಕೋಟಿಗೂ ಹೆಚ್ಚು ಸಾಲ ಮಾಡಿದ್ದರೆ, ನಮ್ಮ ಕಾಂಗ್ರೆಸ್ ಸರ್ಕಾರ, ಕಳೆದ ನಾಲ್ಕು ವರ್ಷದಲ್ಲಿ 256000 ಕೋಟಿ ರೂ. ಸಾಲ ಮಾಡಿದೆ. ಅಂತೆಯೇ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ದೇಶದ ಮೇಲೆ 53.11 ಲಕ್ಷ ಕೋಟಿ ಸಾಲವಿತ್ತು. ಈಗ 218 ಲಕ್ಷ ಕೋಟಿ ಸಾಲವಿದೆ, ಅಂದರೆ ಪ್ರಧಾನಿ ಮೋದಿಯವರ 12 ವರ್ಷದ ಅಧಿಕಾರದ ಅವಧಿಯಲ್ಲಿ 165 ಲಕ್ಷ ಕೋಟಿಯಷ್ಟು ಸಾಲ ಮಾಡಿದ್ದಾರೆ. ಈ ಸಂಖ್ಯೆಯು ಬಿಜೆಪಿ ಸರ್ಕಾರ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೆಚ್ಚು ಸಾಲ ಮಾಡಿದೆ ಎಂಬುದನ್ನು ಸೂಚಿಸುತ್ತದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಅಧಿವೇಶನದಲ್ಲಿ ಬಜೆಟ್ ನ ಬಗ್ಗೆ ವಿಸ್ತೃತ ಚರ್ಚೆಗಳಾಗಿದ್ದು, ಈಗಾಗಲೇ ಸುದೀರ್ಘ ಉತ್ತರವನ್ನೂ ನೀಡಲಾಗಿದೆ. ದೇಶದ ಜಿಡಿಪಿಯು 7.14 ರಷ್ಟಿದ್ದರೆ, ರಾಜ್ಯದ ಜಿಡಿಪಿ 8.1 ರಷ್ಟಿದೆ. ರಾಜ್ಯದ ಬಜೆಟ್ನ ಗಾತ್ರ ಈ ಬಾರಿ ಕಳೆದ ವರ್ಷಕ್ಕಿಂತ 9.4 ರಷ್ಟು ಹೆಚ್ಚಿದೆ. ಕೇಂದ್ರ ಬಜೆಟ್ ಗಿಂತ ಕರ್ನಾಟಕದ ಬಜೆಟ್ ಉತ್ತಮವಾಗಿದೆ. ರಾಜ್ಯ ಜಿಎಸ್ ಟಿ ಸಂಗ್ರಹಣೆಯಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ, ಬಂಡವಾಳ ಹೂಡಿಕೆಯಲ್ಲಿಯೂ ರಾಜ್ಯ 2 ನೇ ಸ್ಥಾನದಲ್ಲಿದೆ. ಆದಾಗ್ಯೂ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

 

Tags:
error: Content is protected !!