ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಏರ್‌ಶೋ ನಡೆಸಲು ಕೇಂದ್ರ ರಕ್ಷಣಾ ಇಲಾಖೆ ಅನುಮತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕ ಸರ್ಕಾರ, ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳು. ಮೈಸೂರು ದಸರಾಗೆ ತನ್ನದೇ ಆದ ಇತಿಹಾಸವಿದೆ. ನಾಡಹಬ್ಬ ದಸರಾ ನೋಡಲು ಲಕ್ಷಾಂತರ ಜನರು ಬರುತ್ತಾರೆ. ಶ್ರದ್ಧಾ, ಭಕ್ತಿಗೆ ಸಾಕ್ಷಿಯಾದ ಮೈಸೂರು ದಸರಾದಲ್ಲಿ ಏರ್‌ಶೋಗೆ ಅನುಮತಿ ನೀಡಿರುವುದಕ್ಕೆ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಗಜಪಡೆಗಳು ಆಗಮಿಸಿ ತಾಲೀಮು ನಡೆಸುತ್ತಿವೆ. ಅಲ್ಲಲ್ಲಿ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ದಸರಾ ಬರುವ ಮುನ್ನವೇ ಎಲ್ಲಾ ಕೆಲಸಗಳು ಮುಗಿಯಲಿವೆ.
ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಏರ್‌ಶೋ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡಲಾಗುತ್ತಿದ್ದು, ಜಂಬೂಸವಾರಿ ದಿನದಂದು ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದೆ.





