Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಾಜ್ಯ ಸರ್ಕಾರದ ಅವನತಿ ಶುರುವಾಗಿದೆ : ಕೆಎಸ್​ ಈಶ್ವರಪ್ಪ

ಬೆಂಗಳೂರು : ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ ದಿನದಿಂದಲೇ ಕಾಂಗ್ರೆಸ್ ಸರ್ಕಾರದ ಅವನತಿ ಅಧಿಕೃತವಾಗಿ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದ್ದಾರೆ. ಅಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲ್ಲ ಎಂಬವುದು ಡಿಕೆ ಶಿವಕುಮಾರ್​ ಅವರ ಮಾತಿನ ಅರ್ಥ. ನಾನೇ ಸಿಎಂ ಎನ್ನುವ ದೌರ್ಭಾಗ್ಯ ಸಿದ್ದರಾಮಯ್ಯಗೆ ಬರಬಾರದಿತ್ತು. ಕರ್ನಾಟಕದ ಅಜಿತ್ ಪವಾರ್ ಹುಟ್ಟಿಕೊಳ್ಳುತ್ತಾರೆ ಅಂತಾ ಹೇಳಿದ್ದೆ. ಅಜಿತ್ ಪವಾರ್​​ಗಳು ಬಹಳ ಜನ ಹುಟ್ಟಿಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಹಿರಂಗ ಹೇಳಿಕೆ ಕೊಡದಂತೆ ಕಾಂಗ್ರೆಸ್​​ ನಾಯಕರು ಸೂಚಿಸಿದ್ದರು. ಅವರು ಬಂದು ಹಫ್ತಾ ವಸೂಲಿ ಮಾಡಿಕೊಂಡು ಹೋದರು. ಮರುದಿನವೇ ಅಸಮಾಧಾನ ಸ್ಫೋಟವಾಗಿದೆ. ಜೆಸಿಬಿಯಿಂದ ಲೂಟಿ ಮಾಡಿದ ರೀತಿ ಹಣದ ಲೂಟಿ ನಡೆಯುತ್ತಿದೆ. ಕೈ ಸರ್ಕಾರ ಬಂದ ಮೇಲೆ ರಸ್ತೆಗೆ ಒಂದು ಬುಟ್ಟಿ ಮಣ್ಣೂ ಹಾಕಿಲ್ಲ. ಇದು ಆರ್ಥಿಕವಾಗಿ ಪಾಪರ್ ಆಗಿರುವ ಸರ್ಕಾರ. ಸಿಎಂ ಗೌರವಯುತವಾಗಿ ರಾಜೀನಾಮೆ ಕೊಡುವುದು ಒಳ್ಳೆಯದು. ಇಲ್ಲದಿದ್ದರೆ ಮಂತ್ರಿಗಳು, ಶಾಸಕರೇ ಸರ್ಕಾರ ಬೀಳಿಸುತ್ತಾರೆ. ಸಿಎಂ, ಡಿಸಿಎಂ ಸಂಪುಟ ವಿಸರ್ಜಿಸಿ ಚುನಾವಣೆಗೆ ಹೋಗೋದು ಸೂಕ್ತ ಎಂದರು.

ಪ್ರಧಾನಿ ಮೋದಿ ಅವರ ಬಗ್ಗೆ ಏಕವಚನದಲ್ಲಿ ಸಿದ್ದರಾಮಯ್ಯ ಪದ ಪ್ರಯೋಗಿಸುವ ಕುರಿತು ಮಾತನಾಡಿದ ಅವರು ಅವರಿಗಿಂತ ಜಾಸ್ತಿ ಪದ ಪ್ರಯೋಗ ಮಾಡಲು ಬರುತ್ತದೆ. ನಾನು ಆರ್​ಎಸ್​ಎಸ್​ನಲ್ಲಿ ಬೆಳೆದವನು. ಬಿಜೆಪಿ ಜವಾಬ್ದಾರಿ ಇರುವವನು. ಸಂಸ್ಕಾರ ಹೇಳಿಕೊಟ್ಟಿದ್ದಾರೆ. ಇನ್ನೊಂದು ಬಾರಿ ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತಾಡಿದರೆ ಆಗ ನಾನು ಏನು ಹೇಳಬೇಕೋ ಅದನ್ನೇ ಹೇಳುತ್ತೇನೆ ಎಂದು ತಿರುಗೇಟು ನೀಡಿದರು.

ಜಾತಿ ಗಣತಿ ಬಿಡುಗಡೆ ಮಾಡುತ್ತಾರೋ ಇಲ್ಲವೋ ಎಂಬುವುದನ್ನು ಬಹಿರಂಗವಾಗಿ ಸರ್ಕಾರ ಹೇಳಬೇಕು. ಕಾಂತರಾಜ್ ವರದಿ ಅವೈಜ್ಞಾನಿಕ ಅಂತ ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ. ನ್ಯಾಯಾಲಯದ ಮೊರೆ ಹೋದರೇ ಒಂದೇ ದಿನದಲ್ಲಿ ವರದಿ ಬಿದ್ದು ಹೋಗುತ್ತದೆ. ಇವರಿಗೆ ಜನರಿಗೆ ಅನುಕೂಲ ಮಾಡಬೇಕು ಅಂತ ಇಲ್ಲ. ಆ ವರದಿ ಇಟ್ಟುಕೊಂಡು ಮತ್ತೆ ವೋಟ್ ಪಡೆಯಬೇಕು ಅಷ್ಟೇ ಎಂದು ವಾಗ್ದಾಳಿ ಮಾಡಿದರು.

ಇದನ್ನು ಮೊದಲು ಮಾಡಿದ್ದು ನಮ್ಮ ಸರ್ಕಾರದಲ್ಲಿ, ಬಿಎಸ್​ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಹಣ ಬಿಡುಗಡೆ ಮಾಡಿದ್ದರು. ಇವರು ಹಿಂದುಳಿದ ವರ್ಗಗಳ ಚಾಂಪಿಯನ್ ಅಂತಾ ಅನ್ನಿಸಿಕೊಳ್ಳಲು ಕಾಂತರಾಜ್ ವರದಿ ಬಗ್ಗೆ ಹೇಳುತ್ತಿದ್ದಾರೆ. ಇಷ್ಟು ಮೋಸ ಮಾಡಿ ಹಿಂದುಳಿದ ವರ್ಗಗಳ ನಾಯಕ ಅಂತಾ ಅನ್ನಿಸಿಕೊಳ್ಳಬೇಕಾ? ಚಡ್ಡಿ ಒಂದು ವಿಷಯ ಬಿಟ್ಟು ಉಳಿದದ್ದು ಎಲ್ಲಾ ಬಿ.ಕೆ. ಹರಿ ಪ್ರಸಾದ್ ಹೇಳಿದ್ದು ಸರಿ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ದೆಹಲಿಯಲ್ಲಿ ಗುರುವಾರ ನಡೆದ ಓಬಿಸಿ ಸಭೆ ವಿಚಾರವಾಗಿ ಮಾತನಾಡಿದ ಅವರು ದೆಹಲಿಯಲ್ಲಿ ಹಿಂದುಳಿದ ವರ್ಗಗಳ ವಿಚಾರವಾಗಿ ಸಭೆ ನಡೆಯಿತು. 40 ಜನ ಸಭೆಯಲ್ಲಿ ಭಾಗವಹಿಸಿದ್ದರು. ಹಿಂದುಳಿದ ವರ್ಗಗಳ ಬಗ್ಗೆ ಸ್ಪಷ್ಟವಾಗಿ ತಜ್ಞರ ಜೊತೆ ಎಲ್ಲಾ ಚರ್ಚೆ ಮಾಡಿ ಒಂದು ರೂಪ ತರಬೇಕು ಎಂದು ಚರ್ಚೆಯಾಯಿತು. ಇದನ್ನು ಹೊರತುಪಡಿಸಿ ರಾಜ್ಯದ ವಿಚಾರ ಯಾವುದೂ ಚರ್ಚೆ ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ