ಬೆಂಗಳೂರು: ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‍ದಾರರಿದ್ದು, ಅವುಗಳನ್ನು ಪರಿಷ್ಕರಣೆ ಮಾಡಲಾಗುವುದು ಜೊತೆಗೆ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲು ಮುಂದಿನ ತಿಂಗಳಿನಿಂದ ವೆಬ್‍ಸೈಟ್ ಮುಕ್ತವಾಗಿಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಚಿಕಿತ್ಸೆಯ ತುರ್ತು ಸಂದರ್ಭಕ್ಕೆ ಅನುಕೂಲವಾಗಲು ಪಡಿತರ ಕಾರ್ಡ್ ನೀಡುವ ಸಲುವಾಗಿ ಪ್ರತ್ಯೇಕ ಪೋರ್ಟಲ್ ಆರಂಭಿಸಲಾಗುತ್ತಿದೆ. ಇನ್ನು ಮುಂದೆ 24 ಗಂಟೆಯೊಳಗಾಗಿ ವೈದ್ಯಕೀಯ ಚಿಕಿತ್ಸೆಗೆ ಪಡಿತರ ಕಾರ್ಡ್‍ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 25 ಲಕ್ಷ ಎಪಿಎಲ್ ಕಾರ್ಡ್‍ದಾರರಿದ್ದು, 1 ಲಕ್ಷ ಮಂದಿ ಅಕ್ಕಿ ತೆಗೆದುಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ಎಪಿಎಲ್ ಕಾರ್ಡ್‍ಗೆ ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆ ಎಂದರು.
ಬಿಪಿಎಲ್ ಕಾರ್ಡ್‍ಗಳನ್ನು ರದ್ದು ಮಾಡುವುದಿಲ್ಲ. ಬದಲಾಗಿ ಅನರ್ಹರನ್ನು ಎಪಿಎಲ್ ವ್ಯಾಪ್ತಿಗೆ ತರುತ್ತೇವೆ. ಒಂದು ವೇಳೆ ಅರ್ಹರ ಕಾರ್ಡ್‍ಗಳು ರದ್ದುಗೊಂಡಿದ್ದರೆ ತಹಶೀಲ್ದಾರ್ ಅವರಿಗೆ ಮೇಲ್ಮನವಿ ಸಲ್ಲಿಸಬಹುದು. ತಕ್ಷಣವೇ ಅವರಿಗೆ ಬಿಪಿಎಲ್ ಕಾರ್ಡ್ ನೀಡುವುದಾಗಿ ಭರವಸೆ ನೀಡಿದರು.





