Mysore
30
few clouds

Social Media

ಬುಧವಾರ, 28 ಜನವರಿ 2026
Light
Dark

ಸಾಲ ವಸೂಲಿ | ಕಿರುಕುಳ ಕಂಡರೆ ಕ್ರಿಮಿನಲ್‌ ಕೇಸ್‌ ದಾಖಲಿಸಲು ಸೂಚನೆ

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ವಸೂಲಿ ವಿಚಾರದಲ್ಲಿ ಜನರಿಗೆ ಕಿರುಕುಳ ನೀಡುವುದು ಕಂಡುಬಂದರೆ ಕ್ರಿಮಿನಲ್ ದೂರು ದಾಖಲಿಸಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು 59 ಸಾವಿರ ಕೋಟಿ ರೂ. ಸಾಲ ನೀಡಿವೆ. ಅಲ್ಲದೆ, ತಮ್ಮ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಸಲುವಾಗಿ ಆರ್ಬಿಐ ಗೈಡ್ಲೈನ್ಸ್ ಉಲ್ಲಂಘಿಸಿ ಸಾಲ ನೀಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಓರ್ವ ವ್ಯಕ್ತಿಗೆ 2ಲಕ್ಷಕ್ಕಿಂತ ಹೆಚ್ಚು ಸಾಲ ನೀಡಬಾರದು ಎಂದು ಆರ್‌ಬಿಐ ನಿಯಮವಿದೆ.  ಇದನ್ನು ಯಾರೂ ಅನುಸರಿಸುತ್ತಿಲ್ಲ. ಓರ್ವ ವ್ಯಕ್ತಿಗೆ 5-6 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಈ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸಲಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಈ ವಾರದೊಳಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಸಿ ಸಾಲ ವಸೂಲಾತಿಗೆ ಆರ್‌ಬಿಐ ನಿಗದಿಪಡಿಸಿರುವ ಮಾದರಿ ಕಾರ್ಯಾಚರಣೆಯನ್ನು ಪಾಲನೆ ಮಾಡಲು ಹಾಗೂ ಬೇಜಾಬ್ದಾರಿಯಿಂದ ಸಾಲ ನೀಡುವುದನ್ನೂ ತಡೆಯಲು ಸೂಚಿಸಲಾಗಿದೆ ಎಂದರು.

ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಯಾವುದೇ ವಿಶೇಷ ಅಧಿಕಾರ ನೀಡಿಲ್ಲ. ಆದರೆ, ರಾಜ್ಯ ಸರ್ಕಾರವೇ ತನ್ನ ಅಧಿಕಾರದ ಮಿತಿಯಲ್ಲಿ ಬೇರೆ ಬೇರೆ ಕಾನೂನುಗಳ ಮೂಲಕ ಮೈಕ್ರೋ ಫೈನಾನ್ಸ್‌ಗಳ ಅಕ್ರಮಗಳಿಗೆ ಕಡಿವಾಣ ಹಾಕಲಿದೆ ಎಂದು ಹೇಳಿದರು.

Tags:
error: Content is protected !!