ಬೆಂಗಳೂರು: ನಾಡಿನ ಜೀವನದಿ ಕಾವೇರಿಗೆ ತ್ಯಾಜ್ಯ ನೀರು ಸೇರ್ಪಡೆಯಾಗಿ ಕಲುಷಿತಗೊಳ್ಳುತ್ತಿದ್ದು ಮಾಲಿನ್ಯ ತಡೆಗೆ ಕ್ರಮಕೈಗೊಳ್ಳಬೇಕೆಂದು ಶಾಸಕ ದಿನೇಶ್ ಗೂಳಿಗೌಡ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಮನವಿ ಮಾಡಿದ್ದರು. ಇದೀಗ ದಿನೇಶ್ ಗೂಳಿಗೌಡ ಮನವಿಗೆ ಡಿ.ಕೆ.ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಕಾವೇರಿ ನದಿಗೆ ತ್ಯಾಜ್ಯ ಮಿಶ್ರಿತ ನೀರು ಪೂರೈಕೆ ಆಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿ, ತ್ಯಾಜ್ಯ ಮಿಶ್ರಿತ ನೀರು ತಡೆಗೆ ಕ್ರಮವಹಿಸಿ ತನಿಖಾ ತಂಡ ರಚನೆ ಮಾಡುವಂತೆ ಶಾಸಕ ದಿನೇಶ್ ಗೂಳಿಗೌಡ ಸಿಎಂ ಡಿಸಿಎಂಗೆ ಮನವಿ ಮಾಡಿದ್ದರು. ಈ ಮನವಿಗೆ ಸರ್ಕಾರ ತ್ವರಿತವಾಗಿ ಸ್ಪಂದಿಸುವ ಮೂಲಕ ಮಾಲಿನ್ಯಗೊಳ್ಳುತ್ತಿರುವ ಕಾವೇರಿ ನದಿಯ ಶುದ್ಧೀಕರಣಕ್ಕೆ ಸರ್ಕಾರ ಕಾರ್ಯಪ್ರವೃತ್ತವಾದಂತಿದೆ.
ಈ ಸಂಬಂಧ ಕಾವೇರಿ ನದಿಗೆ ತ್ಯಾಜ್ಯ ನೀರು ಬಿಡುವ ದೂರಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಅದನ್ನು ತಡೆಯಲು ಸ್ಥಳೀಯ ಪ್ರಾಧಿಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.
ನದಿ ನೀರು ಮಲೀನಗೊಳ್ಳದಂತೆ ತಡೆಯಲು ಸೂಕ್ತಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತವಾಗಿ ಆದೇಶಿಸಿದ್ದಾರೆ.
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಸಮಿತಿ ರಚಿಸಿ ಎರಡು ವಾರದಲ್ಲಿ ಸವಿಸ್ತಾರ ವರದಿ ಸಲ್ಲಿಸಲು ಕ್ರಮಕೈಗೊಳ್ಳುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಇನ್ನು ಈ ವಿಚಾರವಾಗಿ ಡಿಸಿಎಂ ಮತ್ತು ಕೈಗಾರಿಕಾ ಸಚಿವರ ಆದೇಶದ ಕುರಿತಂತೆ ಪ್ರತಿಕ್ರಿಯಿಸಿರುವ ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಈ ಕುರಿತು ಪರಿಶೀಲಿಸಿ, ಚರ್ಚಿಸಿ ಕಡತ ಮಂಡಿಸುವುದಾಗಿ ತಿಳಿಸಿದ್ದಾರೆ.





