ಬೆಂಗಳೂರು: ನಮ್ಮ ಸರ್ಕಾರದ ಈ ಬಾರಿಯ ಬಜೆಟ್ ದೇಶಕ್ಕೆ ಮಾದರಿ. ದೇಶದ ಬೇರೆ ರಾಜ್ಯಗಳು ನಮ್ಮ ಬಜೆಟ್ ಅನ್ನು ಗಮನಿಸುತ್ತಿದ್ದು, ನಮ್ಮ ರಾಜ್ಯದ ಬಜೆಟ್ ಉತ್ತಮವಾಗಿದೆ. ಹಾಗಾಗಿ ಕರ್ನಾಟಕದ ಜನತೆಗೆ ಅನುಕೂಲ ಆಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.8) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಾರಿ ಬಜೆಟ್‌ನಲ್ಲಿ ಸಿಎಂ ಸಿದ್ದಾಮಯ್ಯ ಅವರು ಟನಲ್ ರಸ್ತೆ ನಿರ್ಮಾಣಕ್ಕೆ 40 ಕೋಟಿ ರೂ.ಬಿಡುಗಡೆ ಮಾಡಿದ್ದಾರೆ. ಹೊಸ ಮೆಟ್ರೋ ಏನೇ ಮಾಡಿದರೂ ಅದರ ಜೊತೆಗೆ ಎಲಿವೇಟೇಡ್ ಕಾರಿಡಾರ್ ಸಹ ನಾವು ಮಾಡುತ್ತೇವೆ. ಶೇ.50% ಕಾರ್ಪೋರೇಷನ್, 50% ಬಿಎಂಆರ್‌ಸಿಎಲ್ ನೀಡುತ್ತದೆ. ಹೀಗಾಗಿ ನಾವು ಕಾರಿಡಾರ್ ಮಾಡುತ್ತೇವೆ ಎಂದರು.
ನಾವು ಹೇಳಿದಂತೆ 300 ಕಿ.ಮೀ. ರಸ್ತೆ ನಿರ್ಮಾಣ ಮಾಡುತ್ತೇವೆ. ಕಾಲುವೆ ಪಕ್ಕದಲ್ಲಿ 50 ಅಡಿ ಬಿಟ್ಟು ರಸ್ತೆ ನಿರ್ಮಾಣ ಮಾಡುತ್ತೇವೆ. ಅದರ ಬದಲಾಗಿ ಅವರಿಗೆ ಟಿಡಿಆರ್ ನೀಡಿ ಅಲ್ಲಿ ರೋಡ್ ಮಾಡುತ್ತೇವೆ. ಹೀಗಾಗಿ 3000 ಕೋಟಿ ರೂ. ವೆಚ್ಚದಲ್ಲಿ 300 ಕಿ.ಮೀ. ರಸ್ತೆ ನಿರ್ಮಾಣ ಆಗಲಿದೆ ಎಂದು ಹೇಳಿದರು.
ಬಿಜೆಪಿ ಅವರು ಏನು ಬೇಕಾದರೂ ಮಾತನಾಡಲಿ
ಇದೇ ಸಂದರ್ಭದಲ್ಲಿ ಬಿಜೆಪಿ ಹಲಾಲ್ ಬಜೆಟ್ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಏನು ಬೇಕಾದರೂ ಮಾತಾಡಲಿ. ಪಾಪ ಅವರು ಇನ್ನೇನು ಹೇಳೋಕೆ ಸಾಧ್ಯ? ಸತ್ಯನಾ ಮುಚ್ಚಿಡೋಕೆ ಆಗುತ್ತಾ? ಬಿಜೆಪಿಯವರು ಬಜೆಟ್‌ನ ಕಣ್ಣಲ್ಲಿ ಓದಿದ್ದಾರೆ, ಕಿವಿಯಲ್ಲಿ ಕೇಳಿಸಿಕೊಡಿದ್ದಾರೆ. ಹೀಗಿರುವಾಗ ಅವರು ಇನ್ನೇನು ಮಾಡುತ್ತಾರೆ, ಹೀಗೇ ಮಾತನಾಡುವುದನ್ನು ಬಿಟ್ಟರೆ, ಬಾಯಿಂದ ಸುಳ್ಳು ಹೇಳಬಹುದು. ಹಾಗಾಗಿ ಅದನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರು ವಿವಿಗೆ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಹೆಸರಿಡುವ ವಿಚಾರ
ಇನ್ನು ಬೆಂಗಳೂರು ವಿವಿಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೆಸರಿಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮನಮೋಹನ್ ಸಿಂಗ್ ಹೆಸರನ್ನು ಯಾಕೆ ಇಡಬಾರದು? ಅವರು ಯಾವ್ಯಾವುದೋ ಹೆಸರು ಇಡುತ್ತಾರೆ. ದೇಶದಲ್ಲಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಫ್ಲೈ ಓವರ್ ಮಾಡಿದ್ದು ಯಾರು? ಬೆಂಗಳೂರಿನ ನೆಲಮಂಗಲದಲ್ಲಿ ಫ್ಲೈಓವರ್ ಮಾಡಿದ್ದು ಯಾರು? ಎಲೆಕ್ಟ್ರಾನಿಕ್ ಸಿಟಿಗೆ ಫ್ಲೈಓವರ್ ಮಾಡಿದ್ದು ಯಾರು? ನರೇಗಾವನ್ನು ಜಾರಿಗೆ ತಂದಿದ್ದು ಯಾರು? ಬಿಜೆಪಿಯವರು ಏನಾದರೂ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.





