ತುಮಕೂರು : ಜ್ಯೋತಿಷಿಯ ಮಾತು ನಂಬಿ ಮಗಳು ತಾಯಿಯನ್ನೇ ಕೊಲೆ ಮಾಡಿರುವ ಘಟನೆ ತುಮಕೂರು ತಾಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ.
ಪುಷ್ಪಲತಾ (55) ಮೃತ ತಾಯಿ, ಸುಚಿತ್ರಾ (35) ಕೊಲೆಗೈದ ಮಗಳು. ತಾಯಿ ಪುಷ್ಪಲತಾ ಹೆಸರಲ್ಲಿ ಒಂದು ಮನೆ ಹಾಗೂ ಬ್ಯಾಂಕ್ ಖಾತೆಯಲ್ಲಿ 40 ಲಕ್ಷ ರೂಪಾಯಿ ಇತ್ತು. ಇದನ್ನು ಲಪಟಾಯಿಸಲು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಆರೋಪಿ ಸುಚಿತ್ರಾ ತುಮಕೂರು ನಗರದ ಶ್ರೀನಗರದಲ್ಲಿ ತನ್ನ ಗಂಡನೊಂದಿಗೆ ವಾಸವಿದ್ದಳು. ಸುಮಾರು ಒಂದೂವರೆ ವರ್ಷಗಳ ಹಿಂದೆ ಸುಚಿತ್ರಾಳ ತಂದೆ ನಿಧನರಾಗಿದ್ದರು. ಈ ಸಾವಿಗೆ ತಾಯಿ ಪುಷ್ಪವತಿ ಕಾರಣ ಎನ್ನುವ ಶಂಕೆಯನ್ನು ಸುಚಿತ್ರಾಗೆ ಜ್ಯೋತಿಷಿ ಹೇಳಿದ್ದನು. ಆನ್ಲೈನ್ನಲ್ಲಿ ಜ್ಯೋತಿಷಿಯನ್ನ ಸಂಪರ್ಕಿಸಿದ್ದ ಸುಚಿತ್ರಾ, ತಂದೆ ಸಾವಿಗೆ ನಿಮ್ಮ ತಾಯಿ ಮಾಟ ಮಾಡಿಸಿದ್ದಾಳೆ ಎಂಬ ಜ್ಯೋತಿಷ್ಯದ ಮಾತುಗಳನ್ನು ನಂಬಿದ್ದಳು ಎನ್ನಲಾಗಿದೆ.
ತಂದೆಯ ಸಾವಿಗೆ ತಾಯಿಯೇ ಕಾರಣ ಎಂದು ಜ್ಯೋತಿಷಿ ಹೇಳಿದ್ದ ಮಾತನ್ನು ನಂಬಿದ್ದ ಸುಚಿತ್ರಾ, ತಾಯಿ ಪುಷ್ಪವತಿ ಮನೆಯೊಳಗೆ ನಿದ್ರಿಸುತ್ತಿದ್ದ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ತಾಯಿಯು ಮೃತಪಟ್ಟ ನಂತರ, ಈ ಸಾವನ್ನು ಸಹಜ ಸಾವು ಎಂದು ಬಿಂಬಿಸಿ, ತ್ವರಿತವಾಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಳು. ಗ್ರಾಮಸ್ಥರು ಮತ್ತು ಸ್ಥಳೀಯರು ಸಾವಿನ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ರಹಸ್ಯ ಬಯಲಾಯಿತು. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಚಿತ್ರಾಳನ್ನು ಬಂಧಿಸಲಾಗಿದೆ.





