ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರವಾಗಿ ಪೊಲೀಸ್ ಅಧಿಕಾರಿಗಳು, ತನಿಖೆ ನಡೆಸುತ್ತಿದ್ದ ವೇಳೆ ಆರೋಪಿ ದರ್ಶನ್ ನಿವಾಸದಲ್ಲಿ 40 ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದರು. ಆದರೆ ಇದೀಗ ಆ ಹಣವನ್ನು ಹಿಂತಿರುಗಿಸುವಂತೆ ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಜನವರಿ.11) ರಂದು ಸೆಷನ್ಸ್ ಕೋರ್ಟ್‌ಗೆ ಆರೋಪಿ ದರ್ಶನ್ ಹಣವನ್ನು ವಾಪಾಸ್ ನೀಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಅವರು ಜಪ್ತಿ ಮಾಡಿದ್ದ 40 ಲಕ್ಷ ರೂ. ಹಣಕ್ಕೂ, ರೇಣುಕಾಸ್ವಾಮಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಆ ಹಣ ನನ್ನ ಸ್ವಂತ ದುಡಿಮೆಯ ಹಣವಾಗಿದೆ. ಹೀಗಾಗಿ ಆ ಹಣವನ್ನು ಮನೆಯಲ್ಲಿಯೇ ಇರಿಸಿದ್ದೆ ಎಂದು ನಮೂದಿಸಿದ್ದಾರೆ.
ಇನ್ನೂ ನನ್ನ ಬಳಿ ಈಗ ನಿತ್ಯ ಖರ್ಚಿಗೆ ಹಾಗೂ ಆರೋಗ್ಯ ತುರ್ತಿಗಾಗಿ ಹಣದ ಅವಶ್ಯಕತೆ ಇದೆ. ಈ ಕಾರಣಕ್ಕೆ ಪೊಲೀಸರು ಜಪ್ತಿ ಮಾಡಿದ್ದ ಹಣವನ್ನು ವಾಪಾಸ್ ನೀಡುವಂತೆ ಮಾಡಬೇಕೆಂಬ ಮನವಿಯನ್ನು ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
40 ಲಕ್ಷ ರೂ. ಹಣದ ತನಿಖೆಗಾಗಿ ಐಟಿ ಪ್ರತ್ಯೇಕ ಅರ್ಜಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಇರುವ ದರ್ಶನ್ ಜಪ್ತಿ ಮಾಡಿದ್ದ ಹಣವನ್ನು ವಾಪಾಸ್ ನೀಡುವಂತೆ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಐಟಿ ತನಿಖಾ ತಂಡವೂ ಸಹ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದೆ.
ಅರ್ಜಿಯಲ್ಲಿ ಏನಿದೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಮನೆಯಲ್ಲಿ ಜಪ್ತಿ ಮಾಡಿದ್ದ 40 ಲಕ್ಷ ರೂ. ಬಗ್ಗೆ ತನಿಖೆ ನಡೆಸುವ ಅವಶ್ಯಕತೆ ಇದೆ. ಏಕೆಂದರೆ ಈ ಹಣದ ಮೂಲ ಮತ್ತು ಅಗತ್ಯತೆಯ ಬಗ್ಗೆ ತನಿಖೆ ನಡೆಸಬೇಕು. ಹೀಗಾಗಿ ತನಿಖೆ ಅವಕಾಶ ನೀಡಬೇಕು ಎಂದು ಕೋರಿ ಐಟಿ ತನಿಖಾ ಸಂಸ್ಥೆಯೂ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.





