ಕಲಬುರಗಿ: ಪಕ್ಷ ನಿರ್ಣಯಿಸಿದಾಗ, ಜನ ಬಯಸಿದಾಗ ದಲಿತ ಮುಖ್ಯಮಂತ್ರಿ ಆಸೆ ಈಡೇರಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಹೆಚ್ಚಿದೆ. ಬಾಬಾ ಸಾಹೇಬ ಅಂಬೇಡ್ಕರ್ ಅವರು ದಲಿತರು ಅಧಿಕಾರದ ನಿರ್ಣಾಯಕ ಸ್ಥಾನದಲ್ಲಿರಬೇಕೆಂದು ಬಯಸಿದ್ದರು. ಪಕ್ಷ ಹಾಗೂ ಜನ ಬಯಸಿದರೆ ದಲಿತ ಸಿಎಂ ಕೂಗು ಈಡೇರಲಿದೆ ಎಂದು ಹೇಳಿದರು.
ಎಸ್‍ಇಪಿಟಿಎಸ್‍ಪಿ ಹಣವನ್ನು ಬಳಕೆ ಮಾಡುವ ಸಂಬಂಧ ದಲಿತ ಸಂಘಟನೆಗಳ ಮುಖಂಡರು ಇತ್ತೀಚೆಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ನಮ್ಮ ಸರ್ಕಾರ ಅದನ್ನು ಪರಿಶೀಲನೆ ಮಾಡುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಎಸ್‍ಇಪಿಟಿಎಸ್‍ಪಿಯನ್ನು ಸಾಮಾನ್ಯ ವರ್ಗಕ್ಕೆ ಬಳಕೆ ಮಾಡುವುದಿಲ್ಲ. ಪರಿಶಿಷ್ಟ ಜಾತಿ/ಪಂಗಡದ ಜನರಿಗೆ ಮಾತ್ರ ಈ ಹಣ ಬಳಕೆ ಮಾಡಲಾಗುತ್ತಿದೆ. ಜನ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ವಿವರಣೆ ನೀಡಿದರು.





