ಬೆಂಗಳೂರು : ನಟ ಯಶ್ ಅವರು ‘ಟ್ಯಾಕ್ಸಿಕ್’ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿನ ಕಾರು ದೃಶ್ಯಗಳ ಬಗ್ಗೆ ಬಿಸಿಬಿಸಿ ಚರ್ಚೆ ಒಂದೆಡೆಯಾಗುತ್ತಿದ್ದರೆ, ಅದರಲ್ಲಿ ಹೀರೋ ಯಶ್ ಹೇಳುವ ಡ್ಯಾಡಿ ಈಸ್ ಹೋಂ ಡೈಲಾಗ್ ಭಾರೀ ಫೇಮಸ್ ಆಗಿದೆ.
ಇದೀಗ ಟಾಕ್ಸಿಕ್ ಸಿನಿಮಾ ಟೀಸರ್ ಮಾದರಿಯಲ್ಲಿಯೇ ಮಾಜಿ ಸಿಎಂ ಕೇಂದ್ರ ಸಚಿವ ಎಚ್‍ಡಿ ಕುಮಾರಸ್ವಾಮಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ AI ಮೂಲಕ ವಿಡಿಯೋ ಒಂದನ್ನು ಎಡಿಟ್ ಮಾಡಿ ಹರಿ ಬಿಟ್ಟಿದ್ದು, ಭಾರಿ ವೈರಲ್ ಆಗಿದೆ. ಇಲ್ಲಿ ಡೈಲಾಗ್ ರಾಜ್ಯ ರಾಜಕಾರಣಕ್ಕೆ, 2028ರ ಚುನಾವಣೆಗೆ ಸಂಬಂಧಿಸಿ ಇದೆ.
ಎಐ ಸೃಷ್ಟಿತ ವಿಡಿಯೊದಲ್ಲಿ ನಾವು ಈ ರಾಜ್ಯವನ್ನು ಶಾಂತಿಯುತವಾಗಿ ಲೂಟಿ ಮಾಡಲು ಬಯಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರೆ, ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯಕ್ಕೆ ಮರಳುತ್ತಾರೆಂದು ನಿಮಗೆ ಅನಿಸುತ್ತಿದೆಯೇ ಎಂದು ಕೇಳುತ್ತಾರೆ. ಆಗ ಡಿಕೆ ಶಿವಕುಮಾರ್ ನನಗನ್ನಿಸುವುದಿಲ್ಲ ಸರ್ ಎಂದಾಗ ಕಾರಿನಲ್ಲಿ ಎಚ್.ಡಿ ಕುಮಾರಸ್ವಾಮಿ ರಾಯಲ್ ಎಂಟ್ರಿ ಕೊಡ್ತಾರೆ. ಅವರು ಇಲ್ಲಿಗೆ ಬರಬಾರದಿತ್ತು ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಕೊನೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಡ್ಯಾಡಿ ಇಸ್ ಹೋಂ ಎಂದು ಡೈಲಾಗ್ ಹೇಳುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್, ಜೆಡಿಎಸ್ ಬಿಜೆಪಿಯೊಂದಿಗೆ ವೀಲಿನವಾಗಲಿದೆ, ಕರ್ನಾಟಕದಲ್ಲಿ 2 ಪಕ್ಷಗಳು ಇರಲಿದೆ ಎಂಬ ಮಾತುಗಳನ್ನಾಡಿದ್ದರು. ಇದಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ. 2028 ರ ಮಹಾ ಕದನಕ್ಕೆ ದಿಲ್ಲಿ ಮಟ್ಟದಲ್ಲೇ ರಣತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.





