ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ದರ್ಶನ್ ಸೇರಿದಂತೆ ಡಿ ಗ್ಯಾಂಗ್‌ನ ಹಲವು ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದು, ಫೆಬ್ರವರಿ.27ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಕೋರ್ಟ್ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು ವಿಚಾರಣೆಗಾಗಿ ಇಂದು(ಜನವರಿ.10) ಹೈಕೋರ್ಟ್‌ನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್ ಸೇರಿದಂತೆ ಡಿ ಗ್ಯಾಂಗ್‌ನ ಹಲವು ಆರೋಪಿಗಳು ಮುಖಾಮುಖಿಯಾಗಿದ್ದರು. ಈ ಅರ್ಜಿ ವಿಚಾರಣೆಯನ್ನು ನಡೆಸಿದ 57ನೇ ಸಿಸಿಎಚ್‌ನ ಏಕ ಸದಸ್ಯ ಪೀಠದ ನ್ಯಾಯಾಧೀಶರು ಫೆಬ್ರವರಿ.25ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ಈ ಅರ್ಜಿ ವಿಚಾರಣೆ ಮುಗಿದ ಬಳಿಕ ಆರೋಪಿ ಪವಿತ್ರಾ ಗೌಡ ಕೋರ್ಟ್ ಹಾಲ್‌ನಲ್ಲಿಯೇ ಆರೋಪಿ ದರ್ಶನ್ ಅವರನ್ನು ಆರು ತಿಂಗಳ ನಂತರ ನೋಡಿ ಭಾವುಕರಾಗಿದ್ದು, ಆರೋಗ್ಯವನ್ನು ವಿಚಾರಿಸಿದ್ದಾರೆ. ಆ ವೇಳೆ ದರ್ಶನ್ ಬೆನ್ನುತಟ್ಟಿ ಸಂತೈಸಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಪವಿತ್ರಾಗೌಡ ಪರ ವಕೀಲರು ಒಂದು ತಿಂಗಳ ಕಾಲ ಹೊರ ರಾಜ್ಯದ ದೇವಾಲಯಗಳಿಗೆ ಪ್ರವಾಸ ಹೋಗುವಂತೆ ಅನುಮತಿ ನೀಡಬೇಕು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ನಟ ದರ್ಶನ್ ಮತ್ತು ಆರೋಪಿ ಪವಿತ್ರಾ ಗೌಡ ಸೇರಿದಂತೆ ಹಲವರಿಗೆ ಕೆಲ ದಿನಗಳ ಹಿಂದೆ ಹೈಕೋರ್ಟ್‌ನ ಏಕ ಸದಸ್ಯ ಪೀಠದಿಂದ ರೆಗ್ಯುಲರ್ ಜಾಮೀನನ್ನು ಮಂಜೂರು ಮಾಡಲಾಗಿತ್ತು. ಈ ಜಾಮೀನನ್ನು ನೀಡುವ ವೇಳೆ ಆರೋಪಿಗಳು ಪ್ರತಿ ತಿಂಗಳು ಕೋರ್ಟ್‌ಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು. ಈ ವಿಚಾರವಾಗಿ ನಟ ದರ್ಶನ್ ಮತ್ತು ಪವಿತ್ರಾ ಸೇರಿದಂತೆ ಇನ್ನುಳಿದ ಆರೋಪಿಗಳು 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಎಲ್ಲ ಆರೋಪಿಗಳು ಮುಖಾಮುಖಿಯಾಗಿ ನ್ಯಾಯಾಧೀಶ ಮುಂದೆ ಹಾಜರಾಗಿದ್ದಾರೆ.