ಮೈಸೂರು : ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಯ ಜೊತೆಗೆ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿಯು ಸಿದ್ದರಾಮಯ್ಯಗೆ ಸಲ್ಲುತ್ತದೆ. ಒಟ್ಟು ಸಮಗ್ರ ಸಾಲದ ಶೇ 50ರಷ್ಟು ಸಾಲ ಇವರೊಬ್ಬರೇ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸಿಟಿ ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿ ಮಾತನಾಡಿದ ಅವರು, 2024-25 ಒಂದೇ ವರ್ಷಕ್ಕೆ 1.26 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದೇ ನಿಮ್ಮ ಸಾಧನೆನಾ.? ಹಾಲಿನಿಂದ ಆಲ್ಕೋಹಲ್ ವರಗೆ ಬೆಲೆ ಏರಿಸಿದ ಕೀರ್ತಿ ನಿಮ್ಮದು. ಯಾವ ಸಾಧನೆಗೆ ಸಮಾವೇಶ ಮಾಡಿದ್ದೀರಿ? ಎಂದು ಕಿಡಿಕಾರಿದರು.
ಸ್ಟಾಂಪ್ ಪೇಪರ್ ಬೆಲೆ ಏರಿಕೆ, ವಾಹನ ರಿಜಿಸ್ಟರ್ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ನಿಮ್ಮ ಸಾಧನೆನಾ? ಈ ಸರ್ಕಾರದಲ್ಲಿ ಕ್ರಿಮಿನಲ್ ಮತ್ತು ಕಮ್ಯುನಲ್ ಗಳಿಗೆ ರಾಜಾಶ್ರಯ ಇದೆ.
ಜಾತಿ ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಹಣ ಇಲ್ಲ. ಹಾಲು ಉತ್ಪಾದಕರಿಗೆ ಸಬ್ಸಿಡಿ ಕೊಟ್ಟಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಸಾಲು ಸಾಲು ಆರೋಪ ಮಾಡಿದರು.
ಎರಡು ವರ್ಷ ಕರಾಳ ದಿನ ಅನುಭವಿಸಿದ್ದೇವೆ. ಈ ಸರ್ಕಾರದ ಅವಧಿಯಲ್ಲಿ 736 ಬಾಣಂತಿ, 1600 ಕ್ಕೂ ಹೆಚ್ಚು ಶಿಶು ಮರಣ, 3000 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಸೇರಿದಂತೆ ಹಲವು ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ನಡೆದಿವೆ.
ಸಿದ್ದರಾಮಯ್ಯ 1 ಕ್ಕೂ 2 ಕ್ಕೂ ಬಹಳ ವ್ಯತ್ಯಾಸ ಇದೆ. ಕೋಮ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.





