ಬೆಂಗಳೂರು : ಬಿಜೆಪಿಯ ನೂತನ ಸಾರಥಿ ಬಿ.ವೈ ವಿಜಯೇಂದ್ರ ಅವರನ್ನು ಮಾಜಿ ಸಚಿವ ಸಿ.ಟಿ ರವಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ನೆನ್ನೆ ವಿಜಯೇಂದ್ರ ಅವರ ನಿವಾಸದಲ್ಲಿ ಸಿ.ಟಿ ರವಿ, ಬಿಜೆಪಿ ನೂತನ ರಾಜ್ಯಾಧ್ಯಕ್ಷರಿಗೆ ಶಾಲು ಹಾರ ಹಾಕಿ ಹೂ ಗುಚ್ಚ ಕೊಟ್ಟು ಆತ್ಮೀಯ ಅಪ್ಪುಗೆ ನೀಡಿ ಅಭಿನಂದಿಸಿದ್ದಾರೆ.
ಈ ಫೋಟೋಗಳನ್ನು ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಸಿ.ಟಿ ರವಿ ಅವರನ್ನು ಭೇಟಿಯಾಗಿ ದೀಪಾವಳಿ ಹಬ್ಬದ ಶುಭ ಕೋರಿ, ಅವರ ಸಲಹೆ ಹಾಗೂ ಮಾರ್ಗದರ್ಶನ ಕೋರಲಾಯಿತು ಎಂದು ಬರೆದುಕೊಂಡಿದ್ದಾರೆ.
ಸಿಟಿ ರವಿ ಅವರು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು, ಅವರಿಗೆ ಈ ಪಟ್ಟ ಕೈ ತಪ್ಪಿದ್ದರಿಂದ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು.ಇದೀಗ ಸ್ವತಃ ಸಿ.ಟಿ ರವಿ, ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದು,ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ಈ ನಡುವೆ ಬಿ.ಎಸ್ ಯಡಿಯೂರಪ್ಪ ಅವರು ಅಸಮಾಧಾನಿತ ನಾಯಕರಿಗೆ ಕರೆ ಮಾಡಿ ಸಮಾಧಾನ ಪಡಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.





