ಬೆಂಗಳೂರು: ಸಿ.ಟಿ.ರವಿ ಬಂಧನ ಪ್ರಕರಣವನ್ನು ಯಾವ ಕಾರಣಕ್ಕೆ ಸಿಐಡಿಗೆ ವಹಿಸಲಾಗಿದೆ. ಸದನದ ಆವರಣದೊಳಗೆ ಶಿಸ್ತು ಕಾಪಾಡುವುದು, ಕಲಾಪ ವ್ಯವಹಾರ ನಿಯಂತ್ರಿಸುವ ಅಧಿಕಾರ ಅಧಿಕಾರ ಸಭಾಪತಿಗೆ ಇರುತ್ತದೆ. ಹೀಗಾಗಿ ಸಭಾಪತಿ ತೀರ್ಪೇ ಅಂತಿಮ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ.ಪರಮೇಶ್ವರ್‌ಗೆ ಪತ್ರ ಬರೆದಿದ್ದಾರೆ.
ಸರ್ಕಾರ, ಕಳೆದ ತಿಂಗಳು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಈ ಆರೋಪ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿದೆ. ಆದರೆ ಇದೀಗ ಸರ್ಕಾರದ ನಡೆಗೆ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಸಭಾಪತಿ ಪ್ರತದಲ್ಲಿ ಏನಿದೆ?
ಸಿ.ಟಿ.ರವಿ ಪ್ರಕರಣವನ್ನು ಯಾವ ಕಾರಣಕ್ಕೆ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಸದನದಲ್ಲಿ ಯಾವುದೇ ಘಟನೆ ನಡೆದರೂ, ಆ ಘಟನೆಯ ಬಗ್ಗೆ ಚರ್ಚಿಸುವುದು ಹಾಗೂ ಅಂತಿಮಗೊಳಿಸುವ ಕುರಿತು ನಿರ್ಧರಿಸುವ ಸಾರ್ವಭೌಮತ್ವ ಅಧಿಕಾರ ಸದಸಕ್ಕೆ ಇರುತ್ತದೆ. ಅಲ್ಲದೇ ಡಿಸೆಂಬರ್.19ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪರಾಮರ್ಶಿಸಿಕೊಂಡು ಪೀಠದ ತೀರ್ಪು ನೀಡಲಾಗಿದೆ. ಹೀಗಿದ್ದರೂ ಶಾಸಕಾಂಗಕ್ಕೆ ಮತ್ತು ಸಭಾಪತಿಯವರಿಗೆ ಪ್ರದತ್ತವಾದ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ಕಾರ್ಯಾಂಗವು ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮೂಲಕ ಸಾಂವಿಧಾನಿಕ ಸಂಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ. ವಿನಾಕಾರಣ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಂಘರ್ಷದ ಪ್ರಮೇಯ ನಿರ್ಮಾಣವಾಗಬಾರದು ಎಂದು ಉಲ್ಲೇಖಿಸಿದ್ದಾರೆ.
ನನಗೆ ಇನ್ನೂ ಪತ್ರ ತಲುಪಿಲ್ಲ: ಜಿ. ಪರಮೇಶ್ವರ್
ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದ ಪತ್ರ ನನಗೆ ಇನ್ನೂ ತಲುಪಿಲ್ಲ. ಕಚೇರಿಗೆ ತಲುಪಿದೆಯಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸುತ್ತೇನೆ. ಕಾನೂನು ಸಲಹೆಗಾರರ ಸಲಹೆ ಪಡೆದು ತೀರ್ಮಾನಿಸುತ್ತೇನೆ. ಕಾನೂನು ಎಲ್ಲರಿಗೂ ಒಂದೇ, ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಸಚಿವೆ ಲಕ್ಷ್ಮೀ ದೂರಿನ ಆಧಾರದ ಮೇರೆಗೆ ಸಿಐಡಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಜೊತೆಗೆ ಈ ಘಟನೆಯಿಂದ ಅನಾವಶ್ಯಕ ಗೊಂದಲ ಆಗಬಾರದೆಂಬ ಕಾರಣಕ್ಕೆ ಸಿಐಡಿ ತನಿಖೆಗೆ ನೀಡಿದ್ದೇವೆ. ಸಭಾಪತಿ ಹಾಗೂ ಸರ್ಕಾರದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.





