ಬೆಂಗಳೂರು: ಸಂಕ್ರಾಂತಿ ಹಬ್ಬ ಬಂತೆಂದರೆ ಗೋ ಪೂಜೆ ಮಾಡುವುದು ಬಹಳ ಪವಿತ್ರವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರದ ಬಂದ ಮೇಲೆ ಸಂಕ್ರಾಂತಿ ಹಬ್ಬಕ್ಕೆ ಹಸುಗಳ ಕೆಚ್ಚಲು ಕೊಯ್ದಿರೋ ಘಟನೆಯನ್ನು ಗಿಫ್ಟ್ ಆಗಿ ನೀಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಚಾಮರಾಜಪೇಟೆಯಲ್ಲಿ ರಾತ್ರೋರಾತ್ರಿ ದುಷ್ಕರ್ಮಿಗಳು ಹಸುಗಳ ಕೆಚ್ಚಲನ್ನು ಕೊಯ್ದಿದಿದ್ದು ಇಂದು ಆರ್.ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಹಸುವಿನ ಕೆಚ್ಚಲನ್ನು ಕತ್ತರಿಸುವಂತಹ ಜಿಹಾದಿ ಮನಸ್ಸುಗಳನ್ನು ಇಂದು ನಾವೆಲ್ಲಾ ನೋಡುತ್ತಿದ್ದೇವೆ. ಯಾರೂ ಕೂಡ ಇಂತಹ ಘಟನೆಯನ್ನು ಊಹಿಸಿರಲಿಲ್ಲ. ನಾನು ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ಘಟನೆಯನ್ನು ವೀಕ್ಷಿಸುತ್ತಿದ್ದೇನೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಸರ್ಕಾರ. ಈ ವರ್ಷದ ನ್ಯೂ ಇಯರ್ ಗಿಫ್ಟ್ ಆಗಿ ಬೆಲೆ ಏರಿಕೆ ಮಾಡಿದರು. ಇದೀಗ ಸಂಕ್ರಾಂತಿ ಹಬ್ಬದ ಅಂಗವಾಗಿ ಹಸುಗಳ ಕೆಚ್ಚಲನ್ನು ಕೊಯ್ದಿರುವ ಘಟನೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂದು ಕಿಡಿಕಾರಿದರು.
ಕೆಚ್ಚಲು ಕೊಯ್ದಿರೋ ಹಸುಗಳ ಮಾಲೀಕ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದು, ಸ್ಥಳೀಯ ಪಶು ಆಸ್ಪತ್ರೆ ಉಳಿವಿಗಾಗಿ ಹಸುಗಳ ಮಾಲೀಕರು ಹೋರಾಟ ಮಾಡಿದ್ದರು. ಪಶು ಆಸ್ಪತ್ರೆಯ ಉಳಿವಿಗಾಗಿ ಈ ಹಸು ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು ಎಂಬ ಕಾರಣಕ್ಕೆ ಅದನ್ನು ಸಹಿಸದಿರುವ ಜಿಹಾದಿ ಮನಸ್ಸುವುಳ್ಳವರು ಇಂತಹ ಕೆಲಸ ಮಾಡಿ, ಕೆಚ್ಚಲಿಗೆ ಹಾನಿ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸರ್ಕಾರ ಸಮಾಜಕ್ಕೆ ಯಾವ ರೀತಿ ಸಂದೇಶವನ್ನು ನೀಡುತ್ತಿದೆ. ಹಿಂದೂಗಳು ಈ ರಾಜ್ಯದಲ್ಲಿ ಜೀವನ ಮಾಡುವುದು ಹೇಗೆ? ರಾಜ್ಯ ಸರ್ಕಾರದ ನಾಯಕರು ಮಾತು ಎತ್ತಿದರೆ ದೇವಸ್ಥಾನಗಳಿಗೆ ಹೋಗಿ ಪೂಜೆ ಮತ್ತು ಹೋಮ ಮಾಡುತ್ತಾರೆ. ಅದೆಲ್ಲಾ ನಾಟಕ ಎಂಬಂತೆ ಬಿಂಬಿತವಾಗಿದೆ ಎಂದು ತಿಳಿಸಿದರು.