ಕಲಬುರ್ಗಿ: ಕೋವಿಡ್ ಹಗರಣದಲ್ಲಿ ಭಾಗಿಯಾಗಿರುವ ತಪ್ಪಿಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾರನ್ನು ಬಿಡುವುದಿಲ್ಲ, ಅವರಿಗೆ ಶಿಕ್ಷೆಯಾಗುತ್ತದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಇಂದು(ಡಿ.14) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಗರಣದಲ್ಲಿ ತಪ್ಪಿಸ್ಥರಿಗೆ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ. ಅದನ್ನು ನಮ್ಮ ಸರ್ಕಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಕೋವಿಡ್ ಸಂದರ್ಭದಲ್ಲಿ ಹಗರಣ ನಡೆದಿತ್ತು ಎಂಬುದಕ್ಕೆ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಹೇಳಿದ್ದಾರೆ.
ಕೋವಿಡ್ ವೇಳೆ ಅವ್ಯವಹಾರ ನಡೆದಿದೆ ಎಂಬುದು ನ್ಯಾಯಮೂರ್ತಿ ಕುನ್ಹಾ ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿಯ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಹಾಗಾಗಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಇದಕ್ಕೆ ಬಿಜೆಪಿಯವರು ಯಾಕೆ ಭಯ ಪಡಬೇಕು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರ ಯಾರನ್ನೋ ಭಯ ಬೀಳಿಸುವುದಕ್ಕೆ ಅಥವಾ ಸೇಡಿನ ರಾಜಕಾರಣಕ್ಕಾಗಲಿ ಈ ತನಿಖೆಯನ್ನು ಮಾಡುತ್ತಿಲ್ಲ. ಬದಲಾಗಿ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರು ಆಕ್ಸಿಜನ್ ಇಲ್ಲದೆ ಬೀದಿಯಲ್ಲಿ ಹೆಣವಾಗಿದ್ದಾರೆ. ಹೀಗಾಗಿ ಜನರಿಗೆ ಮಾತು ಕೊಟ್ಟಂತೆ ನಮ್ಮ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.