ಕೋಲಾರ : ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಫೈನಲ್ ಅಸೆಂಬ್ಲಿ ಲೈನ್ (FAL) ನಾಳೆ (ಫೆಬ್ರವರಿ 17) ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುಯೆಲ್ ಮ್ಯಾಕ್ರಾಂ ಅವರು ಈ ಘಟಕವನ್ನು ವರ್ಚುವಲ್‌ನಲ್ಲಿ ಉದ್ಘಾಟಿಸಲಿದ್ದಾರೆ. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಮತ್ತು ಏರ್‌ಬಸ್ ಹೆಲಿಕಾಪ್ಟರ್ಸ್ ಸಂಯುಕ್ತ ಸಾಹಸದಲ್ಲಿ ಸ್ಥಾಪಿತವಾಗಿರುವ ಈ ಘಟಕವು ಏರ್‌ಬಸ್‌ನ ಹೆಚ್ಚು ಮಾರಾಟವಾಗುವ H125 ಲೈಟ್ ಯೂಟಿಲಿಟಿ ಹೆಲಿಕಾಪ್ಟರ್‌ಗಳನ್ನು ಅಸೆಂಬಲ್ ಮಾಡಲಿದೆ. ಭಾರತದಲ್ಲಿ ಖಾಸಗಿ ವಲಯದ ಮೊದಲ ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯವಾಗಿರುವ ಇದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನ ಏಕಸ್ವಾಮ್ಯವನ್ನು ಮುರಿದು ಹೊಸ ಯುಗ ಆರಂಭಿಸಲಿದೆ ಎನ್ನಲಾಗಿದೆ.
16 ಎಕರೆ ವಿಸ್ತೀರ್ಣದ ಈ ಘಟಕವು ವಾರ್ಷಿಕ 10 ಹೆಲಿಕಾಪ್ಟರ್‌ಗಳ ಆರಂಭಿಕ ಸಾಮರ್ಥ್ಯ ಹೊಂದಿದ್ದು, ಬೇಡಿಕೆಗೆ ತಕ್ಕಂತೆ ವಿಸ್ತರಣೆ ಯೋಜಿಸಲಾಗಿದೆ. ಮೊದಲ ‘ಮೇಡ್ ಇನ್ ಇಂಡಿಯಾ’ H125 ಹೆಲಿಕಾಪ್ಟರ್ 2027ರಲ್ಲಿ ವಿತರಣೆಯಾಗಲಿದೆ. ಭಾರತದ ಜೊತೆಗೆ ಇತರ ದೇಶಗಳಿಗೂ ರಫ್ತು ಮಾಡುವ ಯೋಜನೆ ಇದೆ.
ಈ ಯೋಜನೆಯು ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ್ ಭಾರತ್’ ಉಪಕ್ರಮಗಳಿಗೆ ಬಲವಾದ ಬೆಂಬಲ ನೀಡುತ್ತದೆ. ಭಾರತ-ಫ್ರಾನ್ಸ್ ರಕ್ಷಣಾ ಸಹಯೋಗವನ್ನು ಮತ್ತಷ್ಟು ಗಾಢಗೊಳಿಸುವ ಈ ಕ್ರಮದಿಂದ 450ಕ್ಕೂ ಹೆಚ್ಚು ನೇರ-ಪರೋಕ್ಷ ಉದ್ಯೋಗಗಳ ಸೃಷ್ಟಿಯಾಗಲಿದೆ. ಏರೋಸ್ಪೇಸ್ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ದೊಡ್ಡ ಹೆಜ್ಜೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.





