ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ ಅನ್ವಯವಾಗುವಂತೆ ನಿಗಮ ಮಂಡಳಿ ಅಧ್ಯಕ್ಷರ ಅಧಿಕಾರವಧಿ ಮುಂದುವರಿಕೆ ಮಾಡಲಾಗಿದೆ.
2024ರ ಜ.26ರಂದು ನಿಗಮ ಮಂಡಳಿ ಅಧ್ಯಕ್ಷರನ್ನ ನೇಮಕ ಮಾಡಿದ್ದ ರಾಜ್ಯ ಸರ್ಕಾರ ಎರಡು ವರ್ಷಗಳ ಅವಧಿಗೆ ನೇಮಕ ಆದೇಶ ಹೊರಡಿಸಲಾಗಿತ್ತು. ಮೊನ್ನೆಯಷ್ಟೇ ಅವಧಿ ಮುಗಿದ ಕಾರಣ 25 ಶಾಸಕರ ಅಧ್ಯಕ್ಷ ಸ್ಥಾನದ ಅಧಿಕಾರವಾಧಿಯನ್ನ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲ 25 ಶಾಸಕರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನದೊಂದಿಗೆ ಮುಂದಿನ ಆದೇಶದ ತನಕ ಮುಂದುವರಿಸಲು ಹೊಸ ಆದೇಶ ಹೊರಡಿಸಲಾಗಿದೆ.
ನಿಗಮ ಮಂಡಳಿ ಅಧ್ಯಕ್ಷರ ಅಧಿಕಾರವಧಿ ಅಂತ್ಯವಾಗಿದ್ದರಿಂದ ಗಾದಿ ಕೈತಪ್ಪುವ ಆತಂಕದಲ್ಲಿದ್ದರು. ಆದರೆ, ಇದೀಗ ಈ ಹಿಂದೆ ನೇಮಕಗೊಂಡಿದ್ದವರನ್ನೇ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರವು 2024 ಜನವರಿ 26 ರಂದು ರಾಜ್ಯದ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಶಾಸಕರುಗಳನ್ನು ನೇಮಕ ಮಾಡಲಾಗಿತ್ತು. ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿತ್ತು. 2026 ಜನವರಿ 26 ಕ್ಕೆ ಎರಡು ವರ್ಷಗಳ ಅವಧಿ ಮುಗಿದ ಹಿನ್ನೆಲೆ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತೆದೆಯೋ ಅಥವಾ ಮುಂದುವರೆಸುತ್ತಾರೋ ಎಂಬ ಕುತೂಹಲ ಹಲವರಲ್ಲಿತ್ತು. ಸದ್ಯ ಸರ್ಕಾರ ಮುಂದುವರೆಸುವ ನಿರ್ಧಾರ ಕೈಗೊಂಡಿದೆ.
ನಿಗಮ ಮಂಡಳಿಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಸಕರನ್ನೇ ಅಧ್ಯಕ್ಷರಾಗಿ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ (ಸಚಿವ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳೊಂದಿಗೆ) ಜನವರಿ 26 ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಮುಂದುವರೆಯಲಿದ್ದಾರೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.
ಇನ್ನು ಮುಖ್ಯವಾಗಿ ಮುಂದಿನ ಆದೇಶದವರೆಗೆ ಎಂದು ಉಲ್ಲೇಖಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಯಾವಾಗ ಬೇಕಿದ್ದರೂ ಸ್ಥಾನಕ್ಕೆ ಕುತ್ತು ಬರಹುದು.
ಶಾಸಕರಾದ ಶರತ್ ಬಚ್ಚೇಗೌಡ, ಶಿವಲಿಂಗೇಗೌಡ, ಪುಟ್ಟರಂಗಶೆಟ್ಟಿ, ಹೆಚ್‌ಸಿ ಬಾಲಕೃಷ್ಣ, ಎಸ್‌ಆರ್ ಶ್ರೀನಿವಾಸ್, ಎನ್‌ಎ ಹ್ಯಾರೀಸ್, ಬಿಕೆ ಸಂಗಮೇಶ್, ಅಬ್ಬಯ್ಯ ಪ್ರಸಾದ್, ಬೇಳೂರು ಗೋಪಾಲಕೃಷ್ಣ ಸೇರಿದಂತೆ 25 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿ ಮುಂದುವರಿಯುವ ಭಾಗ್ಯ ಸಿಕ್ಕಿದೆ.




