ಬೆಂಗಳೂರು: ನಮಗಾಗಿ ಬೆವರು ಸುರಿಸಿ ದುಡಿಯುವ ಕಾರ್ಯಕರ್ತರ ಮನಸ್ಸನ್ನು ನೋಯಿಸಬಾರದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿಯಲ್ಲಿ ಇತ್ತೀಚೆಗೆ ಬಣ ರಾಜಕೀಯ ಮುಂದುವರಿದಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣದ ನಡುವೆ ಕಿತ್ತಾಟ ತಾರಕಕ್ಕೇರಿದೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗಿಳಿಸಲೇಬೇಕು ಎಂದು ಪಣ ತೊಟ್ಟಿರುವ ಶಾಸಕ ಯತ್ನಾಳ್ ಪದೇ ಪದೇ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮನೆಯ ಗೃಹ ಪ್ರವೇಶದ ನೆಪಹೇಳಿ ದೆಹಲಿಗೆ ತೆರಳಿರುವ ಯತ್ನಾಳ್ ಅಂಡ್ ಟೀಂ ಬಿಜೆಪಿ ಹೈಕಮಾಂಡ್ ಭೇಟಿ ಮಾಡುವ ಎಲ್ಲಾ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಬೆಳವಣಿಗೆ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಎಂಎಲ್‌ಸಿ ಸಿ.ಟಿ.ರವಿ ಅವರು, ಈಗ ನಮಗಾಗಿ ಬೆವರು ಸುರಿಸಿ ದುಡಿಯುವ ಕಾರ್ಯಕರ್ತರ ಮನಸ್ಸನ್ನು ನೋಯಿಸಬಾರದು. ವಿಶ್ವಾಸ ಇಲ್ಲದೇ ಇರುವ ಸಂಬಂಧ ಬಹಳ ದಿನ ಉಳಿಯಲ್ಲ ಎಂದು ಕಿಡಿಕಾರಿದರು.





