Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ರಾಜ್ಯದ 15 ಕಡೆ ರೋಪ್‌ ವೇ ನಿರ್ಮಾಣ: ಎಚ್‌.ಕೆ.ಪಾಟೀಲ್‌ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ 15 ಕಡೆ ರೋಪ್‌ ವೇಗಳ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದ್ದು, ನಿರ್ಮಾಣ ಹಾಗೂ ಕಾರ್ಯ ನಿರ್ವಹಣೆಯನ್ನು ಅಧಿಕೃತಗೊಳಿಸುವ ಸಲುವಾಗಿ 2024ನೇ ಸಾಲಿನ ವಿಧೇಯಕವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಸುವರ್ಣಸೌಧದಲ್ಲಿ ಇಂದು(ಡಿಸೆಂಬರ್‌.17) ಈ ಕುರಿತು ಸದನದ ಕಲಾಪದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ವಿಧೇಯಕವನ್ನು ಮಂಡಿಸಲಾಗುತ್ತಿದ್ದು, ರೋಪ್‌ ವೇಗಳ ಸಹಾಯದಿಂದ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಲಿದೆ. ಹೀಗಾಗಿ ಸದನ ವಿಧೇಯಕ ಮಂಡನೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

ಈ ವೇಳೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ವಿಧೇಯಕದ ಅಡಿ ರಚಿಸಲಾಗುವ ಸಲಹಾ ಪ್ರಾಧಿಕಾರದಲ್ಲಿ ಸರ್ಕಾರದ ಅರಣ್ಯ ಇಲಾಖೆ ಕಾರ್ಯದರ್ಶಿಗಳನ್ನು ಸಹ ಸದಸ್ಯರನ್ನಾಗಿ ನೇಮಿಸಬೇಕು. ರೋಪ್‌ ವೇ ನಿರ್ಮಿಸಲು ಉದ್ದೇಶಿಸಿದ ಹಲವು ಸ್ಥಳಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅದಕ್ಕೆ ಶೀಘ್ರವೇ ಅವುಗಳಿಂದ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌ ಮಾತನಾಡಿ, ರೋಪ್‌ ವೇಗಳು ಮಲೆನಾಡು ಭಾಗದಲ್ಲಿ ಗುಡ್ಡದ ಮೇಲೆ ಕಾಲುದಾರಿಗಳ ನಿರ್ಮಾಣದಿಂದ ಉಂಟಾಗುವ ಭೂ ಕುಸಿತ ತಡೆಯಲು ಸಹಾಯಕವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ರೋಪ್‌ ವೇಗಳ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆಗೆ ಸರ್ಕಾರ ವಿಧೇಯಕದಲ್ಲಿ ಅಧಿಕ ಮಹತ್ವ ನೀಡಬೇಕು ಎಂದಿದ್ದಾರೆ.

ಇನ್ನು ಶಾಸಕ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ಶ್ರವಣಬೆಳಗೊಳದಲ್ಲಿ ರೋಪ್‌ ವೇ ನಿರ್ಮಿಸಲು ಭಾರತೀಯ ಪುರಾತತ್ವ ಇಲಾಖೆ ಅನುಮತಿ ನೀಡುತ್ತಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ರೋಪ್‌ ವೇ ಅನ್ನು ನಿರ್ಮಿಸಲು ಸಲಹಾ ಪ್ರಾಧಿಕಾರದಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ಎಲ್ಲಾ ಶಾಸಕರು ನೀಡಿದ ಸಲಹೆ ಮತ್ತು ಸೂಚನೆಗಳನ್ನು ಆಧಾರಿಸಿ ಸದನದಲ್ಲಿ ಧ್ವನಿ ಮತದೊಂದಿಗೆ ತಿದ್ದುಪಡಿ ವಿಧೇಯಕವನ್ನು ಅಂಗೀಕಾರ ಮಾಡಲಾಗಿದೆ.

Tags:
error: Content is protected !!