ಬೆಂಗಳೂರು : ಜಾರಿ ನಿರ್ದೇಶನಾಲಯವು(ಇ.ಡಿ) ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆಸಿದ ದಾಳಿಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಪರಮೇಶ್ವರ್ ಮನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆದು ಕೈಗೆ ಸ್ಟ್ರಿಪ್ಸ್ ಅಂಟಿಸಿಕೊಂಡೇ ಪರಮೇಶ್ವರ್ ಮನೆಗೆ ಆಗಮಿಸಿದರು. ಸುದೀರ್ಘ ಕಾಲ ಚರ್ಚೆ ನಡೆಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆರೋಗ್ಯ ಕುಟುಂಬ ಕಲ್ಯಾಣ ಸಚಿವ ದಿನೇಶ್‍ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ, ಹಾಸನ ಸಂಸದ ಶ್ರೇಯಸ್ ಪಟೇಲ್, ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ ಪಿ.ಎಂ.ಅಶೋಕ್, ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಸೇರಿದಂತೆ ಹಲವು ಅಧಿಕಾರಿಗಳು ಗೃಹಸಚಿವರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಸಚಿವ ಪರಮೇಶ್ವರ್ ಅವರ ಜೊತೆ ಎಚ್.ಸಿ.ಮಹದೇವಪ್ಪ, ದಿನೇಶ್‍ಗುಂಡೂರಾವ್, ಸತೀಶ್ ಜಾರಕಿಹೊಳಿಯವರು ಒಂದೇ ಕಾರಿನಲ್ಲಿ ಮನೆಯಿಂದ ಹೊರಹೋಗಿದ್ದುದು ವಿಶೇಷವಾಗಿತ್ತು.
ನಾಲ್ಕು ಮಂದಿ ಸಚಿವರು ಒಂದೇ ಕಾರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸಕ್ಕೆ ತೆರಳಿದರು. ಅಲ್ಲಿ ನೂತನ ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಅವರ ಅಭಿನಂದನೆ ಬಳಿಕ ಮುಖ್ಯಮಂತ್ರಿಯವರು ಸಚಿವರ ಜೊತೆ ಪ್ರತ್ಯೇಕ ಚರ್ಚೆ ನಡೆಸಿದರು.





