ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆಸಲಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಹೆಚ್ಚಿನ ತನಿಖೆಗೆ ಆಗ್ರಹಿಸಬೇಕು ಎಂದು ಆಗ್ರಹಿಸಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಬಿವೈ ವಿಜಯೇಂದ್ರ ಅವರ ಮೆನೆಗೆ ಅಗತ್ಯ ದಾಖಲೆಗಳ ಜತೆಯಲ್ಲಿ ತೆರಳಿದ್ದರು.
ಆದರೆ ಅವರನ್ನು ಅರ್ಧಕ್ಕೆ ತಡೆದ ಪೊಲೀಸರು ಅಲ್ಲಿಂದ ವಾಪಾಸ್ ಕಳುಹಿಸಿದ್ದಾರೆ. ಮುಡಾದಲ್ಲಿ 48 ಸೈಟ್ ಹಂಚಿಕೆಯಲ್ಲಿ ಜೆಡಿಎಸ್ ಅಕ್ರಮ ಎಸಗಿದ್ದು, ಇದನ್ನು ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ 2011ರಲ್ಲಿ ಸಭಾಪತಿ ಅವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದಾಖಲೆ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳ ಮೂಲಕ ಬಿವೈ ವಿಜಯೇಂದ್ರ ಭೇಟಿಗೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹಾಗೂ ಕಾಂಗ್ರೆಸ್ ಮುಖಂಡ ಮನೋಹರ್ ತೆರಳಿದ್ದು, ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ.
ಮುಡಾ ಪ್ರಕರಣ ದಿನೇ ದಿನೇ ರೋಚಕತೆಯಲ್ಲಿ ಕಾಣುತ್ತಿರುವ ಬೆನ್ನಲ್ಲೇ ದೇವೇಗೌಡರ ಕುಟುಂಬ 48 ಸೈಟ್ ಹಂಚಿಕೆಯಲ್ಲಿ ಭಾರೀ ಅಕ್ರಮ ಎಸಗಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಬಿಜೆಪಿಯ ನಿಲುವೇನು ಎಂದು ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಮುಡಾದಲ್ಲಿ ಭಾರೀ ಅಕ್ರಮವಾಗಿದ್ದು, ಬಿಜೆಪಿ ನಾಯಕರು ಎಷ್ಟು ಸೈಟ್ ಪಡೆದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಹಾಗೂ ಬಿಎಸ್ ಯಡಿಯೂರಪ್ಪ ಅವರ ತನಿಖೆ ವಿಚಾರವಾಗಿ ಬಿಜೆಪಿಯ ನಿಲುವೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.





