ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಹೊರಡಿಸಿದ್ದಾರೆ. ಹಾಗೆಯೇ ಉಳಿದ ನಾಯಕರ ಹಗರಣಗಳ ತನಿಖೆಗೂ ರಾಜ್ಯಪಾಲರು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿಂದು (ಆ.31) ಪ್ರತಿಭಟನೆ ನಡೆಯಿತು.
ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಪ್ರಜಾತಾಂತ್ರಿಕ ಮಾರ್ಗದಲ್ಲಿ ಅಸ್ಥಿರಗೊಳಿಸುವ ಕೇಂದ್ರ ಸರ್ಕಾರ ಮತ್ತು ರಾಜಭವನದ ಷಡ್ಯಂತ್ರಗಳನ್ನು ವಿರೋಧಿಸಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆಗೆ, ಕ್ರಮಕ್ಕೆ ಅನುಮತಿ ನೀಡದ ರಾಜ್ಯಪಾಲರ ತಾರತಮ್ಯ ನೀತಿಯನ್ನು ಖಂಡಿಸಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.
ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿಯಿಂದ ರಾಜಭವನದ ಕಡೆಗೆ ಕಾಲ್ನಡಿಗೆಯಲ್ಲಿ ತೆರಳಿದ ಕೈಪಡೆ, ದಾರಿಯುದ್ದಕ್ಕೂ ರಾಜ್ಯಪಾಲರ ತಾರತಮ್ಯ ನೀತಿಯ ವಿರುದ್ಧ ಘೋಷಣೆ ಕೂಗುತ್ತಾ, ಮೈತ್ರಿ ಪಕ್ಷಗಳ ನಾಯಕ ಅಕ್ರಮ ಹಗರಣಗಳ ತನಿಖೆ ನಡೆಸುವಂತೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಸಿಎಂ ಡಿಸಿಎಂ ಸೇರಿದಂತೆ ಹಲವು ಕಾಂಗ್ರೆಸ್‌ನ ಪ್ರಬಲ ನಾಯಕರು ಭಾಗಿಯಾಗಿದ್ದರು.





