ಬೆಂಗಳೂರು: 2028ಕ್ಕೆ ನಾವು ಅಧಿಕಾರಕ್ಕೆ ಬಂದು ಮತ್ತೆ ರಾಮನಗರ ಎಂದು ಹೆಸರು ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದ್ದು, ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಯಾವುದೇ ಕಾರಣಕ್ಕೂ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಿಸೋದು ಬೇಡ ಎಂದು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆಗ್ರಹಿಸಿವೆ. ಆದರೂ ಯಾವುದಕ್ಕೂ ಜಗ್ಗದ ಆಡಳಿತ ಪಕ್ಷ ಕಾಂಗ್ರೆಸ್, ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಅನುಮೋದಿಸಿದೆ.
ಈ ನಡುವೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, 2028ಕ್ಕೆ ನಾವು ಅಧಿಕಾರಕ್ಕೆ ಬಂದು ಮತ್ತೆ ರಾಮನಗರ ಎಂದು ಹೆಸರು ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬರೆದಿಟ್ಟುಕೊಳ್ಳಿ ಎಂದು ಟಾಂಗ್ ನೀಡಿದರು.
ಎಚ್‌ಡಿಕೆ ನನ್ನ ಸರ್ವನಾಶ ಬಯಸುತ್ತಿದ್ದಾರೆ. ಕುಮಾರಸ್ವಾಮಿಗೆ ವಿಚಾರದ ಅರಿವಿದೆ. ರಾಮನಗರ ಎಲ್ಲೂ ಹೋಗಲ್ಲ ಅಲ್ಲೇ ಇರುತ್ತದೆ. ರಾಮನಗರಕ್ಕೆ ಬಂದು ಅಕ್ರಮಕ್ಕೆ ಪ್ರಯತ್ನ ಮಾಡಲು ಯತ್ನಿಸಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ ಎಲ್ಲರೂ ನಮ್ಮವೇ. ಮುಂದಿನ ಪೀಳಿಗೆಗಾಗಿ ಈ ಹೆಸರು ಇಡಲಾಗಿದೆ ಎಂದರು.