ಬೆಂಗಳೂರು: ಲೋಕಸಭೆ ಚುನಾವಣಾಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಬೀಳಿಸುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ಇಂದು(ಮೇ.೧೫) ಮಾಧ್ಯಮದರೊಂದಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷದ ಅವಧಿಯ ಮುಖ್ಯಮಂತ್ರಿಯ ಹಗಲುಗನಸು ಕಾಣುತ್ತಿದ್ದಾರೆ. ಭ್ರಷ್ಟ ಸರ್ಕಾರದ ಪಾಪದ ಕರ್ಮ, ರೈತರ ಆತ್ಮಹತ್ಯೆ, ಬರಗಾಲದ ಬವಣೆ ಸೇರಿದಂತೆ ಮೊದಲಾದ ಕಾರಣಗಳಿಂದ ಬೇಸತ್ತ ಕಾಂಗ್ರೆಸ್ ಶಾಸಕರೇ ಸರ್ಕಾರ ಬೀಳಿಸಲಿದ್ದಾರೆ ಎಂದರು.
ಈ ಹಿಂದೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದಾಗ ಕಾಂಗ್ರೆಸ್ ನಾಯಕರು ಏನೂ ಮಾಡಲಿಲ್ಲ. ಆಗ ಬಂದಂತೆ ಮುಂದೆಯೂ ಬಿಟ್ಟು ಬರುತ್ತಾರೆ. ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ. ಮಹಾರಾಷ್ಟ್ರದಲ್ಲಿ 90 ಕ್ಕೂ ಅಧಿಕ ಶಾಸಕರು ಪಕ್ಷ ಬಿಟ್ಟು ಹೋಗಿದ್ದರು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದ ನಂತರ ಕಾಂಗ್ರೆಸ್‌ಗೆ ಗಂಟೆ ಮೂಟೆ ಕಟ್ಟುವುದೇ ಗತಿ ಎಂದು ಲೇವಡಿ ಮಾಡಿದರು.