ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಈಗ ಬೀಗರುಗಳಾಗುತ್ತಿದ್ದಾರೆ.
ಎಸ್.ಆರ್.ವಿಶ್ವನಾಥ್ ಮಗಳನ್ನು ಭೈರತಿ ಸುರೇಶ್ ಪುತ್ರ ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ವಿರೋಧಿ ಪಡೆಯ ನಾಯಕರು ಈಗ ನೆಂಟರಾಗುತ್ತಿದ್ದಾರೆ.
ಭೈರತಿ ಸುರೇಶ್ ಪುತ್ರ ಸಂಜಯ್ ಹಾಗೂ ವಿಶ್ವನಾಥ್ ಪುತ್ರಿ ಅಪೂರ್ವ ಇಬ್ಬರು ಕಾಲೇಜು ಸ್ನೇಹಿತರಾಗಿದ್ದರು. ಎರಡೂ ಕುಟುಂಬದ ನಡುವೆ ಇಂದು ಅಂತಿಮ ಹಂತದ ಮದುವೆ ಮಾತುಕತೆ ನಡೆದಿದೆ.
ಶಾಸಕ ವಿಶ್ವನಾಥ್ ಮನೆಗೆ ಸುರೇಶ್ ಕುಟುಂಬ ತೆರಳಿದ್ದು, ಮದುವೆ ಮಾತುಕತೆ ನಡೆಸಿದ್ದಾರೆ.
ಸಂಜಯ್ ಹಾಗೂ ಅಪೂರ್ವ ಇಬ್ಬರು ಮಲ್ಲೇಶ್ವರಂನ ವಿದ್ಯಾಮಂದಿರದಲ್ಲಿ ಶಿಕ್ಷಣ ಪಡೆದುಕೊಂಡಿದ್ದರು. ಇಬ್ಬರ ನಡುವೆ ಕಾಲೇಜು ದಿನಗಳ ಸಮಯದಲ್ಲೇ ಉತ್ತಮ ಸ್ನೇಹವಿತ್ತು.
ಆ ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಅದರಂತೆ ಇದೀಗ ಇಬ್ಬರ ಪ್ರೇಮ ಮದುವೆ ಹಂತಕ್ಕೆ ಬಂದು ನಿಂತಿದೆ. ಎರಡೂ ಕುಟುಂಬಗಳು ಕುಳಿತು ಮಾತನಾಡಿ ಮದುವೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಭೈರತಿ ಸುರೇಶ್ ಹಾಗೂ ಎಸ್.ಆರ್.ವಿಶ್ವನಾಥ್ ಬೀಗರುಗಳಾಗಲಿದ್ದಾರೆ.