ನನ್ನ ರಾಜೀನಾಮೆ ಕೇಳುವ ನೈತಿಕತೆ ಇವರಿಗೆ ಇಲ್ಲ: ಎಚ್‌ಡಿಕೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಚಿವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನನ್ನ ರಾಜೀನಾಮೆ ಕೇಳುವ, ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಲೋಕಯುಕ್ತ ವಿಚಾರಣೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂಬುದು ದಾಖಲೆಗಳೇ ಹೇಳುತ್ತವೆ. ಲೋಕಾಯುಕ್ತ ಅಧಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಕಾಂಗ್ರೆಸ್ ನವರ ಹಾಗೆ ನಾನು ಸರ್ಕಾರದ ಭೂಮಿ ಲೂಟಿ ಮಾಡಿಲ್ಲ. ಮೂಡಾ ಹಗರಣವನ್ನೇ ನೋಡಿದ್ದೀರಿ. ಕುಮಾರಸ್ವಾಮಿ ಯಾಕೆ ರಾಜಿನಾಮೆ ಕೊಡಬೇಕು? ಲೂಟಿ ಮಾಡಿರೋದು ಕಾಂಗ್ರೆಸ್ ನವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳುಹಿಸಬೇಕು ಎಂದು ಹಿಂದಿನ ಐದು ವರ್ಷದ ಕಾಂಗ್ರೆಸ್ ಸರಕಾರದಲ್ಲಿ ಸಂಚು ರೂಪಿಸಿದ್ದರು. ಅವರ ಆಸೆ ಈಡೇರಲಿಲ್ಲ. ಯಾಕೆಂದರೆ ಆ ಸಂದರ್ಭದಲ್ಲಿಯೂ ದಿನವೂ ಕಾಂಗ್ರೆಸ್ ನಾಯಕರ ಭ್ರಷ್ಟ ಮುಖವನ್ನು ಬಯಲು ಮಾಡುತ್ತಿದ್ದೆ. ಇವನ ಕಾಟ ತಡೆಯಲು ಆಗುತ್ತಿಲ್ಲ, ಒಂದು ದಿನವಾದರೂ ಇವನನ್ನು ಜೈಲಿಗೆ ಕಳಿಸಬೇಕು ಎಂದು ಹೊಂಚು ಹಾಕಿದ್ದರು. ಆಗಲೂ ಇವರಿಗೆ ನನ್ನನ್ನು ಏನೂ ಮಾಡಲು ಆಗಲಿಲ್ಲ, ಈಗಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಸರ್ಕಾರದ ಕೆಲವು ಪೋಲಿಸರು ದರೋಡೆಕೋರರು
ನಾನೇನು ತಪ್ಪು ಮಾಡಿ ಇಲ್ಲಿಗೆ ಬಂದಿಲ್ಲ. ಸ್ವಯಂಪ್ರೇರಿತವಾಗಿ ಬಂದಿದ್ದೇನೆ. ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ. ಈ ಸರ್ಕಾರದಲ್ಲಿರುವ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ದರೋಡೆಕೋರರು. ಆ ದಾಖಲೆಗಳನ್ನು ನೋಡಿದ ಮೇಲೆ ಈ ಸಚಿವರುಗಳು ನನ್ನ ಮಾತನಾಡಲಿ ಎಂದರು.
ಪೊಲೀಸ್ ಠಾಣೆಯಾದ ಡಿಜಿ ಕಚೇರಿ
ಇವರ ಆಡಳಿತದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಹೇಗೆ ಕೆಲಸ ಮಾಡುತ್ತಿದೆ? ಒಂದು ಪೊಲೀಸ್ ಠಾಣೆಯಂತೆ ಕೆಲಸ ಮಾಡುತ್ತಿದೆ. ಕಳೆದ ಹಲವು ದಿನಗಳಿಂದ ಡಿಜಿ ಕಚೇರಿಗೆ ಹೆಣ್ಣುಮಕ್ಕಳನ್ನು ಕರೆಸಿಕೊಂಡು ಎಫ್ ಐಆರ್ ಹಾಕುತ್ತಿದ್ದಾರೆ ಎಂದು ಸಚಿವರು ದೂರಿದರು.