Mysore
20
overcast clouds
Light
Dark

ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದೆ: ಆರ್.ಅಶೋಕ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇದ್ದು, ಇದನ್ನು ಬಿಜೆಪಿ ಮೇಲೆ ಹೊರಿಸುವ ಪ್ರಯತ್ನವನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಇಂದು (ಮೇ.೧೫)ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರೇವಣ್ಣ ಅವರನ್ನು ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಕೂಡಲೇ ಬಂಧಿಸಿದ್ದರೂ, ಆದರೆ ಕಾರು ಚಾಲಕನನ್ನು ಮಾತ್ರ ಬಂಧಿಸಿಲ್ಲ. ಎಸ್ಐಟಿ ಅಧಿಕಾರಿಗಳು ಪಕ್ಷಪಾತ ಧೋರಣೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ಇಲ್ಲಿ ತಿಮಿಂಗಿಲವೇ ಇದೆ.‌ ಅದನ್ನು ಬಡಿದು ತಿನ್ನಬೇಕಾ ಬೇಡವಾ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ತೀರ್ಮಾನಿಸಲಿದೆ. ಆದರೆ ಮಾಜಿ ಪ್ರಧಾನಿ ದೇವೇಗೌಡರಿಗೆ ಈ ವಯಸ್ಸಿನಲ್ಲಿ ನೋವು ಕೊಡಬೇಕಿತ್ತಾ ಎಂದು ಒಕ್ಕಲಿಗರು ಮಾತಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಬಿಜೆಪಿಯ ಮೇಲೆ ಹೊರಿಸುವ ಪ್ರಯತ್ನ ನಡೆದಿದೆ ಎಂದರು.

ಎಸ್‌ಐಟಿ ಅಧಿಕಾರಿಗಳು ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆ‌ ನಂತರ ಯಾರೆಲ್ಲ ಬಂಧನಕ್ಕೊಳಗಾಗುತ್ತಾರೆ ಎಂದು‌ ಗೊತ್ತಾಗಲಿದೆ. ಕಾರು ಚಾಲಕ ಎಲ್ಲೋ ನಿಂತು ಸಂದೇಶ ಕಳುಹಿಸುತ್ತಿದ್ದಾನೆ. ಹಾಸನದಲ್ಲಿ ಎಲ್ಲ ಕಡೆ ಪೆನ್‌ಡ್ರೈವ್ ಹಂಚಲಾಗಿದೆ ಎಂದ ಮೇಲೆ ಅದು ಬಿಜೆಪಿ ಕಾರ್ಯಕರ್ತರಿಗೆ ತಲುಪಿರಬಹುದು. ಆದರೆ ಕಾಂಗ್ರೆಸ್ ಕಾರ್ಯಕರ್ತರ ಬಳಿಯೂ ವೀಡಿಯೋ ಇದೆ ಎಂದರು.

ಮಾಜಿ ಸಚಿವ ರೇವಣ್ಣ ಜೈಲಿಗೆ ಹೋದಾಗ ಕಾಂಗ್ರೆಸ್ ‌ನಾಯಕರು ಹೆಚ್ಚು ಖುಷಿ ಪಟ್ಟಿದ್ದಾರೆ. ಇದು ವ್ಯವಸ್ಥಿತ ಸಂಚಾಗಿದ್ದು, ಎಲ್ಲರೂ ಟೀಮ್ ಮಾಡಿಕೊಂಡಿದ್ದಾರೆ. ಚುನಾವಣೆಯ ದೃಷ್ಟಿಯಿಂದ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.