ಮಾಗಡಿ ಶಾಸಕ ಬಾಲಕೃಷ್ಣ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ನೀಡಿದ ಹೇಳಿಕೆ ಸದ್ಯ ಕಾಂಗ್ರೆಸ್ ಹಾಗೂ ಎನ್‌ಡಿಎ ಕರ್ನಾಟಕ ನಾಯಕರುಗಳ ನಡುವೆ ವಾದ ವಿವಾದ ನಿರ್ಮಾಣವಾಗುವುದಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಹೇಳಿಕೆ ಕುರಿತು ಇದೀಗ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ಲೋಕಸಭೆ ಚುನಾವಣೆಗೆ ಗ್ಯಾರಂಟಿ ಯೋಜನೆ ತಳುಕುಹಾಕಿ ಮಾತನಾಡಿರುವುದು ಕಾಂಗ್ರೆಸ್ ಸರ್ಕಾರದ ಅಸಲಿ ಆಲೋಚನೆಯನ್ನು ಬಯಲು ಮಾಡಿದೆ, ಕೊಟ್ಟ ಕೈಯಲ್ಲೇ ಕಸಿದುಕೊಳ್ಳುವ ಹುನ್ನಾರ ಇಲ್ಲಿ ಸ್ಪುಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್ ಯುದ್ಧಕ್ಕೂ ಮೊದಲೇ ಸೋಲೊಪ್ಪಿಕೊಂಡಿದೆ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒದ್ದಾಡುತ್ತಿರುವ ಕಾಂಗ್ರೆಸ್ ಸರ್ಕಾರ ತನ್ನ ಶಾಸಕರೊಬ್ಬರ ಮೂಲಕ ರದ್ದು ಮಾಡುತ್ತೇವೆ ಎಂದು ಹೇಳಿಸಿದೆ ಎಂದು ಬರೆದುಕೊಂಡಿದ್ದಾರೆ.
ಬಾಲಕೃಷ್ಣ ಹೇಳಿಕೆಯನ್ನು ಬ್ಲಾಕ್‌ಮೇಲ್ ಎಂದಿರುವ ನಿಖಿಲ್ ಕುಮಾರಸ್ವಾಮಿ ಮತದಾರರು ಗ್ಯಾರಂಟಿ ಯೋಜನೆ ಕೊಡಿ ಮತ ಹಾಕುತ್ತೇವೆ ಎಂದು ಕೇಳಿರಲಿಲ್ಲ, ವಾಸ್ತವ ಹೀಗಿದ್ದ ಮೇಲೆ ಗ್ಯಾರಂಟಿಗಳನ್ನು ಹೇಗೆ ವಾಪಸ್ ಪಡೆಯುತ್ತೀರಿ? ಕಾಂಗ್ರೆಸ್ ಪಕ್ಷದ ಈ ವರ್ತನೆಗೆ ನನ್ನ ಹಾಗೂ ನಮ್ಮ ಪಕ್ಷದ ತೀವ್ರ ವಿರೋಧವಿದೆ ಎಂದೂ ಸಹ ನಿಖಿಲ್ ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.





