ಬೆಂಗಳೂರು: ಆನ್‌ಲೈನ್ ಫುಡ್ ಆಪ್‌ಗಳಾದ ಝೋಮ್ಯಾಟೋ, ಡೋಮಿನೋಸ್, ಮತ್ತು ಸ್ವಿಗ್ಗಿಯ ಮೇಲೆ ಸರ್ಕಾರ ಸೆಸ್ ಹೇರಲು ನಿರ್ಧಾರ ಮಾಡಿದೆ.
ಈ ವಿಚಾರವಾಗಿ ಸರ್ಕಾರವೂ ಜನತೆಯ ಮೇಲೆ ಹೊಸ ಶುಲ್ಕದ ಬರೆಯನ್ನು ಎಳೆಯಲು ಮುಂದಾಗಿದ್ದು, ಸೆಸ್‌ನಿಂದ ಸಂಗ್ರಹಿಸಲಾಗುವ ಹಣವನ್ನು ಕಾರ್ಮಿಕ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ. ಇದರಿಂದ ಸರ್ಕಾರ ಗಿಗ್ ಕಾರ್ಮಿಕರಿಗೆ ಕಲ್ಯಾಣ ನಿಧಿ ಸೌಲಭ್ಯವನ್ನು ರಚಿಸಲು ಮುಂದಾಗಿದೆ.
ನೂತನ ಶುಲ್ಕ ಹೆಚ್ಚಳ ಮಾಡುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್ ಅವರು, ಸೆಸ್ ಹಾಕಬೇಕೆಂದು ನಿರ್ಧರಿಸಿದ್ದೇವೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ 32 ಸಭೆಗಳನ್ನು ಮಾಡಲಾಗಿದೆ. ಅಲ್ಲದೇ, ಅಮೆಜಾನ್, ಫ್ಲಿಪ್ ಕಾರ್ಟ್, ಸ್ವಿಗ್ಗಿ, ಒಳಗೊಂಡಂತೆ ಆನ್‌ಲೈನ್ ಕಂಪೆನಿಗಳೊಂದಿಗೆ ಒಪ್ಪಿಗೆ ಪಡೆದಿದ್ದು, ಡ್ರಾಫ್ಟ್‌ನ್ನು ಸಹ ಮಾಡಲಾಗಿದೆ ಎಂದರು.
ಡ್ರಾಫ್ಟ್‌ನಲ್ಲಿ ಸ್ವಲ್ಪ ಬದಲಾವಣೆಯಾಗಬಹುದು. ಆದರೆ, ಗಿಗ್ ಕಾರ್ಮಿಕರನ್ನು ಬಳಕೆ ಮಾಡುವ ಎಲ್ಲಾ ಕಂಪನಿಗಳಿಗೆ ಇದು ಅನ್ವಯ ಆಗಲಿದೆ. ರಾಹುಲ್ ಗಾಂಧಿಯವರು ಗಿಗ್ ಕಾರ್ಮಿಕರ ಬಗ್ಗೆ ತಿಳಿಸಿದ್ದರು. ಈ ಕಾರಣದಿಂದ ಅದೇ ಮಾದರಿಯಲ್ಲಿ ಈ ಬಿಲ್ ಅನ್ನು ತರುತ್ತಿದ್ದೇವೆ. ಅಲ್ಲದೇ, ನಾವು ಗೂಡ್ಸ್‌ನಲ್ಲಿ ಏನು ಸೆಸ್ ಹಾಕಲು ಆಗುವುದಿಲ್ಲ. ಹೀಗಾಗಿ ನಾವು ಟ್ರಾನ್ಸ್‌ಪೋರ್ಟ್ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.





