Mysore
23
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಬಿಡಿಎ ಆಸ್ತಿಗಳನ್ನು ಮಾರಾಟ ಮಾಡಿ ೨೦೦ ಕೋಟಿ ರೂ. ಕಿಕ್‌ ಬ್ಯಾಕ್‌ ಪಡೆದ ಕಾಂಗ್ರೆಸ್‌ ಸರ್ಕಾರ : ಆರ್‌.ಅಶೋಕ ಅನುಮಾನ 

ಬೆಂಗಳೂರು : ಗ್ಯಾರಂಟಿಗಳಿಂದ ಪಾಪರ್‌ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಬಿಡಿಎ ಆಸ್ತಿಗಳನ್ನು ಮಾರಾಟ ಮಾಡಿ ವರಿಷ್ಠರಿಗೆ ಕಪ್ಪ ನೀಡಲು ಮುಂದಾಗಿದೆ. ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವುದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಪಾಪರ್‌ ಆಗಿ ದಿವಾಳಿಯ ಪರಮಾವಧಿಗೆ ತಲುಪಿದೆ. ಕೇರಳ ಸರ್ಕಾರ ದಿವಾಳಿಯಾಗಿ ಸಾಲವೂ ಸಿಗುತ್ತಿಲ್ಲ. ಅದೇ ರೀತಿ ನಮ್ಮ ರಾಜ್ಯವೂ ಆರ್ಥಿಕತೆಯಲ್ಲಿ ಕೊನೆಯ ಸ್ಥಾನಕ್ಕೆ ಬರಲಿದೆ. ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಿ ದುಡ್ಡು ಹೊಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಸರ್ಕಾರ ಪಾರ್ಕಿಂಗ್‌ ಕಾಂಪ್ಲೆಕ್ಸ್‌, ಹಾಕಿ ಸ್ಟೇಡಿಯಂನ ಕಟ್ಟಡವನ್ನು ಗುತ್ತಿಗೆಗೆ ನೀಡಿ ಮಾರಾಟ ಮಾಡಿತ್ತು. ಈಗ ಆರು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಸುಮಾರು ಐವತ್ತು ವರ್ಷಕ್ಕೆ ಗುತ್ತಿಗೆಗೆ ನೀಡಲಾಗುತ್ತಿದೆ. ಇದು ಮಾರಾಟದ ಮಾದರಿಯಲ್ಲೇ ಇದೆ. ಇಂದಿರಾನಗರ, ಎಚ್‌ಎಸ್‌ಆರ್‌ ಲೇಔಟ್‌, ಆಸ್ಟಿನ್‌ ಟೌನ್‌, ಕೋರಮಂಗಲ, ವಿಜಯನಗರ, ಆರ್‌.ಟಿ.ನಗರ, ಸದಾಶಿವನಗರ ಕಾಂಪ್ಲೆಕ್ಸ್‌ಗಳು ಬಿಡಿಎ ಸ್ವತ್ತು. ಈಗ ಇದನ್ನು ನುಂಗಣ್ಣಗಳು ನುಂಗಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್‌ ಈ ಕಾರ್ಯಕ್ಕೆ ಮುಂದಾದಾಗ ಜನರು ಪ್ರತಿಭಟಿಸಿದ್ದರು. ಈಗ ಮತ್ತೆ ಈ ಕಾರ್ಯಕ್ಕೆ ಮುಂದಾಗಿದ್ದು, ಜನರು ಪ್ರತಿಭಟನೆ ಮಾಡಿದ್ದಾರೆ. ಇದರಲ್ಲಿ 200 ಕೋಟಿ ರೂ. ಗೂ ಅಧಿಕ ಕಿಕ್‌ಬ್ಯಾಕ್‌ ಇದೆ. ಇದು ಸುಮಾರು 3,000 ಕೋಟಿ ರೂ. ಮೌಲ್ಯದ ಆಸ್ತಿಗಳಾಗಿವೆ ಎಂದು ಹೇಳಿದರು.

ಸರ್ಕಾರವೇ ಹೀಗೆ ನುಂಗುವ ಕ್ರಮದ ವಿರುದ್ಧ ಪ್ರತಿಭಟಿಸಲಾಗುವುದು. ಸರ್ಕಾರ ಆದಾಯ ಹೆಚ್ಚಿಸಿಕೊಳ್ಳಲು ಬೇರೆ ಮಾರ್ಗ ನೋಡಲಿ. ಕೂಡಲೇ ಈ ಟೆಂಡರ್‌ ರದ್ದುಪಡಿಸಲಿ. ಇಲ್ಲವಾದರೆ ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಯಡಿಯೂರಪ್ಪನವರ ಸರ್ಕಾರ ಇದ್ದಾಗ ಈ ಕಡತ ಬಂದಿತ್ತು. ಇದು ಲೂಟಿ ಮಾಡುವ ಸ್ಕೀಮ್‌ ಎಂದಿದ್ದಕ್ಕೆ ಯಡಿಯೂರಪ್ಪ ಅದನ್ನು ವಾಪಸ್‌ ಕಳುಹಿಸಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಈ ಲೂಟಿ ಮಾಫಿಯಾ ಮತ್ತೆ ಮುಂದೆ ಬಂದಿತ್ತು. ಆಗಲೂ ಮನವಿ ವಜಾ ಮಾಡಲಾಗಿತ್ತು. ಈಗ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಗೆ ಕಪ್ಪ ನೀಡಲು ಆಸ್ತಿ ಲೂಟಿ ಮಾಡಲು ಹೊರಟಿದ್ದಾರೆ. ಬೆಂಗಳೂರಿನ ಜನರು ಕೂಡ ಇದರ ವಿರುದ್ಧ ನಿಲ್ಲಬೇಕು ಎಂದು ಕೋರಿದರು.

 

Tags:
error: Content is protected !!