Mysore
29
clear sky

Social Media

ಶನಿವಾರ, 31 ಜನವರಿ 2026
Light
Dark

ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳ್ಳಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಸ್ಥಿರವಾಗಿದೆ ಮತ್ತು ಪತನಗೊಳ್ಳಲು ಸಾಧ್ಯವಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಯವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾದ ರೀತಿಯಲ್ಲಿಯೇ ಕರ್ನಾಟಕದಲ್ಲಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೋಮವಾರ ಹೇಳಿದ್ದರು.

ಆಪರೇಷನ್ ಕಮಲದ ಬಗ್ಗೆ ಬಿಜೆಪಿ ಎಂದಿಗೂ ಮಾತನಾಡಿಲ್ಲ. ಆದರೆ, ಅದರ ಬದಲಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಾಟಕ ಕಂಪನಿಯವರೇ ಮಾತನಾಡುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಬಿದ್ದರೆ, ಅದಕ್ಕೆ ಡಿಕೆ ಶಿವಕುಮಾರ್ ಕಾರಣ. ಆಪರೇಷನ್ ಕಮಲ ಮತ್ತು ಶಾಸಕರಿಗೆ 50 ಕೋಟಿ ಆಮಿಷ ನೀಡುತ್ತಿರುವ ಬಗ್ಗೆ ಮಾತನಾಡುತ್ತಿರುವುದು ಡಿಕೆ ಶಿವಕುಮಾರ್ ಅವರ ನಾಟಕ ಕಂಪನಿಯವರು. ಆಪರೇಷನ್ ಕಮಲ ಎಂಬ ಪದವನ್ನು ಕಾಂಗ್ರೆಸ್ ಸೃಷ್ಟಿಸಿದೆ. ನೆರೆಯ ರಾಜ್ಯದಲ್ಲಿ ಅಜಿತ್ ಪವಾರ್ ಬಣ ಸಿಡಿದಂತೆಯೇ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಜಾರಕಿಹೊಳಿ ಆರೋಪಿಸಿದ್ದರು.

ಅವರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮ ಸರ್ಕಾರ ಸ್ಥಿರವಾಗಿದೆ ಮತ್ತು ಬಿಜೆಪಿ ನಾಯಕರೊಬ್ಬರ ಹೇಳಿಕೆಯಿಂದ ಅದು ಪತನವಾಗಲು ಸಾಧ್ಯವಿಲ್ಲ ಎಂದು ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ನಾಲ್ಕು ವರ್ಷಗಳ ಹಿಂದೆ ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಜಾರಕಿಹೊಳಿ, ಆಪರೇಷನ್ ಕಮಲದ ಬಗ್ಗೆ ಬಿಜೆಪಿ ಎಂದಿಗೂ ಮಾತನಾಡಿಲ್ಲ. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪವನ್ನು ನಿರಾಕರಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!