Mysore
20
overcast clouds
Light
Dark

ದಸರಾ ಯಶಸ್ವಿಗೆ ಶ್ರಮಿಸಿದ ಅಧಿಕಾರಿಗಳಿಗೆ ಅಭಿನಂದನೆ: ಸಿಎಂ ಸಿದ್ದರಾಮಯ್ಯ

ಮೈಸೂರು : ನಾನೂ ಸಹ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಗ ಅಧಿಕಾರಿಗಳ ಸಹಕಾರದಿಂದ ಯಶಸ್ವಿ ದಸರಾ ಮಾಡಿದ್ದೇವೆ. ಅದೇ ರೀತಿ ಈ ಬಾರಿಯ ದಸರಾ ಯಶಸ್ವಿಗೆ ಶ್ರಮಿಸಿದ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಭೋಜನ ಕೂಟದಲ್ಲಿ ಅವರು ಮಾತನಾಡಿದರು.

‘ಎಲ್ಲಾ ಸಚಿವರು, ಶಾಸಕರು, ಮಾಜಿ ಶಾಸಕರು, ಎಲ್ಲಾ ಅಧಿಕಾರಿಗಳ ಸಹಕಾರದಿಂದ ದಸರಾ ಯಶಸ್ವಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಮಾರ್ಗದರ್ಶನದಂತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿರುವುದರಿಂದ ಮೈಸೂರು ದಸರಾ ಯಶಸ್ಸು ಆಗಿದೆ’ ಎಂದರು.

ಅಧಿಕಾರಿಗಳು ಅರ್ಪಣೆ ಮನೋಭಾವನೆಯಿಂದ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಹಾಗೂ ಟೀಕೆ ಟಿಪ್ಪಣಿ ಗಳು ಬಂದಿರುವುದಿಲ್ಲ. ಕಾರಣ ದಸರಾ ಅಚ್ಚುಕಟ್ಟಾಗಿ ನಡೆದಿದೆ. ಈ ಸಂಬಂಧ ಅಧಿಕಾರಿಗಳಿಗೆ ಅಭಿನಂದನೆಗಳು ಹೇಳುತ್ತೇನೆ ಎಂದರು.

ಮೈಸೂರು ಪ್ರಾಂತ್ಯದ ಕಲೆ ಸಾಹಿತ್ಯ ಶ್ರೀಮಂತಗೊಳಿಸಬೇಕು. ಅಧಿಕಾರಿಗಳು ಈ ಸಂಬಂಧ ಕೆಲಸ ಮಾಡಬೇಕು. ದಸರಾದಲ್ಲಿ ನಾಡ ಹಬ್ಬವಾಗಿ ಆಚರಿಸಲು ಹೆಚ್ಚು ಜನರು ದಸರಾದಲ್ಲಿ ಭಾಗವಹಿಸಬೇಕು ಹಾಗೂ ಅರ್ಥಪೂರ್ಣವಾಗಿ ದಸರಾ ಮಾಡಬೇಕು. ಜನ ಪರವಾಗಿ ಅಧಿಕಾರಿಗಳು ಇರಬೇಕು. ಜನ ಪರವಾದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮೈಸೂರು ಅಭಿವೃದ್ಧಿಗಾಗಿ ಯೋಜನೆ ಸಿದ್ಧಪಡಿಸಲಾಗುತ್ತಿದ್ದು ಇದಕ್ಕಾಗಿ ಅಧಿಕಾರಿಗಳು ಅಭಿವೃದ್ಧಿ ಪರವಾಗಿ ಕೆಲಸ ಮಾಡಲು ಮುಂದಾಗಬೇಕು. ಸಮಾಜದಲ್ಲಿ ನಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಮುಂದಿನ ಮೈಸೂರು ದಸರಾವನ್ನು ಜನಪರ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗೋಣ ಎಂದರು.

ಬರವಿದೆ, ಜನರಿಗೆ ಕುಡಿಯುವ ನೀರಿನ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕ್ರಮವಹಿಸಬೇಕು. ಜಾನುವಾರುಗಳಿಗೆ ಮೇವು ತೊಂದರೆ ಆಗಬಾರದು. ಹಳ್ಳಿ ಗಳಿಗೆ ಅಧಿಕಾರಿಗಳು ಹೋಗಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ಯಾವುದೇ ಟೀಕೆ ವ್ಯಕ್ತವಾಗದೇ ಇರುವ ಹಾಗೆ ದಸರಾ ಯಶಸ್ಸಿಗೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಕಾರ್ಯ ನಿರ್ವಹಿಸುವ ಮೂಲಕ ಶ್ರಮಿಸಿದ್ದಾರೆ. ಸರ್ಕಾರದ ಪರವಾಗಿ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಹೇಳುತ್ತೇನೆ ಎಂದರು.ಇದೇ ರೀತಿ ಮುಖ್ಯಮಂತ್ರಿ ಗಳ ಜಿಲ್ಲೆಯಾಗಿರುವುದರಿಂದ ಅಭಿವೃದ್ಧಿ ಪರವಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ರಾಜ್ಯ ಸಭಾ ಸದಸ್ಯರಾದ ರೆಹಮಾನ್ ಖಾನ್, ಮೇಯರ್ ಶಿವಕುಮಾರ್, ಶಾಸಕರಾದ ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿ.ಪಂ. ಸಿಇಓ ಎಂ.ಗಾಯಿತ್ರಿ, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಮುಡಾ ಆಯುಕ್ತ ದಿನೇಶ್ ಕುಮಾರ್, ಡಿಡಿಪಿಐ ಪಾಂಡುರಂಗ, ವಾರ್ತಾ ಇಲಾಖೆ ಉಪನಿರ್ದೇಶಕ ಅಶೋಕ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಸವಿತಾ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ