ಮಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವಿನ ಪ್ರಕರಣದಲ್ಲಿ ಶವ ಹೂತಿರುವ ಜಾಗವನ್ನು ದೂರುದಾರ ಇಂದು ಬೆಳಿಗ್ಗೆ ವಿಶೇಷ ತನಿಖಾ ತಂಡಕ್ಕೆ ತೋರಿಸಿದ್ದಾರೆ.
ತನಿಖಾಧಿಕಾರಿ ಅನುಚೇತ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತಲ್ಲಿ ದೂರುದಾರನನ್ನು ಸ್ಥಳಕ್ಕೆ ಕರೆದೊಯ್ಯಲಾಯಿತು. ಧರ್ಮಸ್ಥಳದ ನೇತ್ರಾವತಿ ನದಿ ದಂಡೆಯಲ್ಲಿರುವ ಸ್ನಾನ ಘಟ್ಟದ ಪಕ್ಕದ ಕಾಡಿಗೆ ತಂಡವನ್ನು ಕರೆದೊಯ್ದ ದೂರುದಾರ ಹದಿನೈದು ಕಡೆ ಶವ ಹೂತಿರುವ ಜಾಗವನ್ನು ತನಿಖಾ ತಂಡಕ್ಕೆ ತೋರಿಸಿದ್ದಾರೆ. ಸ್ಥಳದ ಮಹಜರು ನಡೆಸಿದ ಪೊಲೀಸರು ಶವವನ್ನು ಹೊರ ತೆಗೆಯಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ದೂರುದಾರ ತಲೆಬುರುಡೆಯೊಂದನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಅದರಲ್ಲಿ ಅಂಟಿಕೊಂಡಿರುವ ಮಣ್ಣನ್ನು ಈ ಶವ ಹೂತಿರುವ ಗುಂಡಿಯ ಮಣ್ಣಿನದೇ ಎಂದು ಪರೀಕ್ಷಿಸಬೇಕಿದೆ. ಶವದ ಡಿಎನ್ಎ ಪರೀಕ್ಷೆ ನಡೆಸಿ ಶವ ಯಾರದು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ, ಸೈಮನ್, ದೂರುದಾರನ ಪರ ಮೂವರು ವಕೀಲರು ಹಾಜರಿದ್ದರು. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.





