ಬೆಳಗಾವಿ: ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಗಾದಿಗೆ ಪೈಪೋಟಿ ನಡೆಯುತ್ತಿದೆ. ದಿನೇ ದಿನೇ ಅದು ದೊಡ್ಡದಾಗುತ್ತಿದೆ. ಸಿದ್ದು ಹಾಗೂ ಡಿಕೆಶಿ ಪರ-ವಿರುದ್ಧ ಹೇಳಿಕೆಗಳನ್ನು ಶಾಸಕರು ಕೊಡುತ್ತಿದ್ದಾರೆ. ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯಲಿದೆ ಎಂದು ಭವಿಷ್ಯ ನುಡಿದರು.
ಇನ್ನು ಮೊನ್ನೆ ಡಿಕೆಶಿ ಅವರು ನಟ್ ಮತ್ತು ಬೋಲ್ಟ್ ಟೈಟ್ ಮಾಡುವ ಅಹಂನಿಂದ ಕೂಡಿದ ಹೇಳಿಕೆ ಕೊಟ್ಟಿದ್ದಾರೆ. ಶಿವಕುಮಾರ್ ಅವರ ಹೇಳಿಕೆ ಚಿತ್ರರಂಗದ ಬಗ್ಗೆ ಹೇಳಿದ್ದಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಶಿವಕುಮಾರ್ ಅವರಿಗೆ ಸಿಎಂ ಆಗಲು ಅವಕಾಶ ನೀಡುತ್ತಿಲ್ಲವೋ ಅವರಿಗೆ ಒಂದು ರೀತಿಯ ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ. ಈ ಬಗ್ಗೆ ಎಲ್ಲರೂ ಚರ್ಚೆ ನಡೆಸುತ್ತಿದ್ದಾರೆ ಎಂದು ವಿವರಣೆ ನೀಡಿದರು.