ಬಾಗಲಕೋಟೆ: ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸುವುದು ಸಾಮಾನ್ಯ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಈ ಕುರಿತು ಬಾಗಲಕೋಟೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು, ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸುವುದು ಸಾಮಾನ್ಯ. ಸಾಯುವವರೆಗೂ ಕೆಲವರಿಗೆ ಸಿಎಂ ಆಗಿ ಅಧಿಕಾರ ಸಿಗುವುದಿಲ್ಲ. ಆದ್ದರಿಂದ ಅದೇನು ವಿಶೇಷ ಬೆಳವಣಿಗೆ ಏನಲ್ಲ. ಅಧಿಕಾರಕ್ಕಾಗಿ ಪೈಪೋಟಿ ಇದ್ದೇ ಇರುತ್ತದೆ. ಅಧಿಕಾರವನ್ನು ವಾಮ ಮಾರ್ಗದ ಮೂಲಕ ಸಾಧಿಸಬಾರದು ಎಂದು ಹೇಳಿದ್ದಾರೆ.
ಈಗ ಸಿದ್ದರಾಮಯ್ಯ ನಾನೇ ಐದು ವರ್ಷ ಆಡಳಿತ ಮಾಡುತ್ತೇನೆ ಎನ್ನುತ್ತಾರೆ. ಆಸೆ ಇರುವುದು ಸಹಜ. ಆ ಬಗ್ಗೆ ತಪ್ಪು ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ. ಡಿಸಿಎಂ ಆದವರಿಗೆ ಸಿಎಂ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವೊಂದು ಸಲ ಡಿಸಿಎಂ ಆಗಿಯೇ ನಿವೃತ್ತಿ ಆಗಬಹುದು. ನನಗೆ ಅಧಿಕಾರ ಸಿಗಲಿಲ್ಲ ಎಂಬ ಪಶ್ಚಾತ್ತಾಪ ಪಡುವುದು ಬೇಡ. ಎಷ್ಟು ವರ್ಷ ಸಿಎಂ ಆಗಿದ್ದೇನೆ ಎನ್ನುವುದು ಮುಖ್ಯವಲ್ಲ. ಸಿಎಂ ಆಗಿದ್ದವರಿಗೆ ಮುಂದುವರಿಯಬೇಕೆಂಬ ಆಸೆ ಇರುತ್ತದೆ ಎಂದರು.





