ಬೆಂಗಳೂರು: ಉಪ ಚುನಾವಣೆಯ ಫಲಿತಾಂಶ 2028ಕ್ಕೆ ದಿಕ್ಸೂಚಿಯಾಗಿದ್ದು, ಅಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿಯೂ ನಾವೇ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು(ನ.23) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಲ್ಲಿನ ಉಪಚುನಾವಣಾ ಫಲಿತಾಂಶದ ಮೂಲಕ 2028ರ ವಿಧಾನಸಭಾ ಚುನಾವಣೆಗೆ ಜನರು ಜನರು ಮುನ್ನುಡಿ ಬರೆದಿದ್ದಾರೆ. ಸುಳ್ಳೇ ಕಾಂಗ್ರೆಸ್ ಮನೆ ದೇವರು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೀಕಿಸಿದ್ದರು. ಅದಕ್ಕೆ ಈ ಉಪ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಿದ್ದಾರೆ.
ನಾನು ಈ ಮೊದಲೇ ಹೇಳಿದಂತೆ ಟೀಕೆ ಸಾಯುತ್ತದೆ ಕೆಲಸ ಉಳಿಯುತ್ತದೆ. ಕಾಂಗ್ರೆಸ್ ಜನರ ಭಾವನೆಯ ಮೇಲೆ ರಾಜಕಾರಣ ಮಾಡುವುದಿಲ್ಲ. ಬದಲಾಗಿ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ. ಹೀಗಾಗಿ ಮತದಾರರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳ ಕುರಿತಂತೆ ವಿಪಕ್ಷಗಳು ಅಪಪ್ರಚಾರ ಮಾಡಿದರು. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿಗೆ ಹಣ ಇಲ್ಲ ಅಂತ ಆರೋಪಿಸಿದ್ದರು. ಆದರೆ ಚುನಾವಣೆ ಫಲಿತಾಂಶ ಬಂದ ಕೂಡಲೇ ಹಣದ ಹೊಳೆ ಹರಿಸಿದ್ದಾರೆಂದು ಹೇಳುತ್ತಾರೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ನೋಡಿ ಮೂರು ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಿದ್ದಾರೆ. ಚುನಾವಣೆಗಳಲ್ಲಿ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ನಿನ್ನೆ ಸಂಜೆಯೇ ಹೇಳಿದ್ದೆ. ಬಿಜೆಪಿ ಜೆಡಿಎಸ್ ಮೈತ್ರಿಯಾದರೂ ನಮಗೆ ಗೆಲುವು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.